ಹುಬ್ಬಳ್ಳಿ :ಬಳ್ಳಾರಿ ಸೆಂಟ್ರಲ್ ಜೈಲು ಸಿಬ್ಬಂದಿ ಹುಬ್ಬಳ್ಳಿ ಮೂಲದ ವಿಚಾರಣಾಧೀನ ಕೈದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ವಿಚಾರಣಾಧೀನ ಕೈದಿ ಮೇಲೆ ಪೊಲೀಸರಿಂದ ಹಲ್ಲೆ ಆರೋಪ ತನ್ನ ಮೈಮೇಲಿನ ಗಾಯಗಳನ್ನು ತೋರಿಸುತ್ತಾ ಹಲ್ಲೆಯ ವಿವರವನ್ನ ನೀಡುತ್ತಿರುವ ಈ ಯುವಕನ ಹೆಸರು ಕಾರ್ತಿಕ್ ಕಾಂಬಳೆ. ಮೂಲತಃ ಹುಬ್ಬಳ್ಳಿಯ ಈ ಯುವಕ ಸದ್ಯ ಜೈಲುಪಾಲಾಗಿ 3 ವರ್ಷಗಳಾಗಿವೆ. ಹುಬ್ಬಳ್ಳಿಯಲ್ಲಿ ನಡೆದ ಕೊಲೆ ಕೇಸ್‌ನಲ್ಲಿ ಸದ್ಯ ಬಳ್ಳಾರಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕಾರ್ತಿಕ್ ಜೈಲು ಸಿಬ್ಬಂದಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾನೆ.
ಸ್ಥಳೀಯನಲ್ಲ ಎಂಬ ಒಂದೇ ಕಾರಣಕ್ಕೆ ಜೈಲಿನ ಜೈಲರ್ ಸೇರಿ ಇತರ ಪೊಲೀಸರು ಮನಬಂದಂತೆ ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾನೆ. ಅಲ್ಲದೆ 10 ರಿಂದ 15 ಜನ ಪೊಲೀಸರು ಒಮ್ಮೆಲೇ ಹೊಡೆದಿದ್ದರಿಂದ ಮೈತುಂಬ ಗಾಯಗಳಾಗಿವೆ. ಆದ್ರೆ, ಇಷ್ಟೆಲ್ಲವಾದ್ರೂ ಸಹ ಎಂಎಲ್ಸಿ ಸಹ ಮಾಡಿಸದೆ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾನೆ.
ಅಲ್ಲದೆ ಕಾರ್ತಿಕ್ ಮೇಲಿನ ಪೊಲೀಸ್ ಹಲ್ಲೆ ಖಂಡಿಸಿ ಜೈಲಿನ ಕೈದಿಗಳು ಸಹ ಊಟ ಬಿಟ್ಟು ಪ್ರತಿಭಟಿಸುತ್ತಿದ್ದಾರಂತೆ. ಸುಖಾಸುಮ್ಮನೆ ಹಲ್ಲೆ ಮಾಡುತ್ತಿದ್ದಾರೆ. ಆದ್ದರಿಂದ ತನ್ನನ್ನ ಧಾರವಾಡ ಜೈಲಿಗೆ ಶಿಫ್ಟ್ ಮಾಡುವಂತೆ ಕೇಳಿಕೊಂಡಿದ್ದಾನೆ.
ಕಾರ್ತಿಕ್ ತಂದೆ ಸಹ ಪೊಲೀಸ್ ವರಿಷ್ಠಾಧಿಕಾರಿ ಸೇರಿ, ಜೈಲರ್ಗೆ ಸಹ ಪತ್ರ ಬರೆದಿದ್ದಾರೆ. ಕಾರ್ತಿಕ್ಗೆ ಚಿಕಿತ್ಸೆಯ ಅವಶ್ಯಕತೆ ಇದೆ. ಆದಷ್ಟು ಬೇಗ ಆತನನ್ನ ಧಾರವಾಡ ಜೈಲಿಗೆ ಹಸ್ತಾಂತರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.