ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿದರು. ಧಾರವಾಡ:ಪಡಿತರ ಅಕ್ಕಿ ನರೇಂದ್ರ ಮೋದಿ ಅವರದ್ದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯಿಸಿದರು. ''ಪ್ರಧಾನಿ ನರೇಂದ್ರ ಮೋದಿ ನೀಡುತ್ತಿರುವ ಅಕ್ಕಿ ಎನ್ನುತ್ತಿದ್ದಾರೆ. ಆದರೆ, ಅದು ನರೇಂದ್ರ ಮೋದಿ ಅಕ್ಕಿ ಅಲ್ಲ, ಯುಪಿಎ ಸರ್ಕಾರದ ಅಕ್ಕಿ'' ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
10 ಕೆಜಿ ಪಡಿತರ ಅಕ್ಕಿ ಕೊಟ್ಟೆ ಕೊಡುತ್ತೇವೆ:ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತೆ ಕಾಯ್ದೆ ತರಲಾಗಿತ್ತು. ಭಾರತ ದೇಶದಲ್ಲಿ ಈ ಕಾಯ್ದೆ ಮೂಲಕ 5 ಕೆಜಿ ಅಕ್ಕಿ ಕೊಟ್ಟಿದ್ದೇವೆ. 1 ಲಕ್ಷ 10 ಸಾವಿರ ಕೋಟಿ ರೂ. ಅಕ್ಕಿ ಇಟ್ಟಿದ್ದು, ಅಷ್ಟು ಅಕ್ಕಿ ಇಟ್ಟು 5 ಕೆಜಿ ಕೊಡಲು ಆರಂಭ ಮಾಡಿದ್ದು ನಾವು. ಹೀಗಾಗಿ ಅದು ಮೋದಿ ಕೊಡುತ್ತಿರುವ ಅಕ್ಕಿ ಅಲ್ಲ. ಯುಪಿಎ ಸರ್ಕಾರದ ಅಕ್ಕಿ ಅದು'' ಎಂದು ಕಿಡಿಕಾರಿದರು. ''10 ಕೆಜಿ ಅಕ್ಕಿಯನ್ನು ನಾವು ಕೊಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಕೇಂದ್ರದ 5 ಕೆಜಿ ಅಕ್ಕಿಗೆ ನಾವು 5 ಕೆಜಿ ಸೇರಿಸಿ, 10 ಕೆಜಿ ಎಂದು ಹೇಳಿದ್ದೇವೆ. ಅದರಂತೆ 10 ಕೆಜಿ ಅಕ್ಕಿ ಕೊಟ್ಟೆ ಕೊಡುತ್ತೇವೆ'' ಎಂದರು.
ಇಂದು ಬೆಂಗಳೂರು - ಧಾರವಾಡ ವಂದೇ ಭಾರತ ರೈಲು ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪದ ಬಗ್ಗೆ ಮಾತನಾಡಿದ ಅವರು, ವರ್ಚುಯಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಧಾರವಾಡದಲ್ಲಿ ಸಾಂಕೇತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ತಮಗೆ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ವಾಧಿಕಾರಿ ಧೋರಣೆ - ಸಂತೋಷ ಲಾಡ್:''ನಮ್ಮನ್ನು ಕರೆದಿಲ್ಲ ಆ ಬಗ್ಗೆ ಮಾಧ್ಯಮದವರು ಅವರನ್ನೇ ಕೇಳಬೇಕು ಈ ರೀತಿ ಮಾಡಿದ್ದು ಸರಿನಾ? ಈ ಕುರಿತು ಮಾಧ್ಯಮಗಳಿಗೆ ಅವರೇ ಉತ್ತರ ನೀಡಬೇಕು. ನರೇಂದ್ರ ಮೋದಿ ರಾಷ್ಟ್ರಪತಿಗಳನ್ನೇ ಸೇರಿಸಿಕೊಳ್ಳುವುದಿಲ್ಲ. ಇನ್ನು ನಮ್ಮದೇನು? ಇದೊಂದು ಸರ್ವಾಧಿಕಾರಿ ಧೋರಣೆಯಾಗಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ'' ಎಂದು ಹೇಳಿದರು.
ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಕಿಡಿ:''ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅಕ್ಕಿ ಲಭಿಸದೇ ಇರುವುದಕ್ಕೆ ರಾಜ್ಯ ಬಿಜೆಪಿ ನಾಯಕರೇ ಪ್ರಮುಖ ಕಾರಣ'' ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಅಕ್ಕಿ ವಿಷಯದಲ್ಲಿ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ನಾವು ಕೇಂದ್ರ ಸರ್ಕಾರದಿಂದ ಉಚಿತ ಅಕ್ಕಿ ಕೇಳುತ್ತಿಲ್ಲ. ರಾಜ್ಯದ ಬಿಜೆಪಿ ನಾಯಕರು ಹೇಳಿಕೊಟ್ಟ ಕಾರಣಕ್ಕೆ ಅಕ್ಕಿ ನೀಡಲಾಗುತ್ತಿಲ್ಲ. ಇದಕ್ಕೆ ರಾಜ್ಯ ಬಿಜೆಪಿ ನಾಯಕರೇ ಪ್ರಮುಖ ಕಾರಣ '' ಎಂದು ಕಿಡಿಕಾರಿದ್ದರು.
''ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೆಸರು ಬರುತ್ತದೆಂದು ಬಿಜೆಪಿ ನಾಯಕರು ಈ ರೀತಿ ಮಾಡುತ್ತಿದ್ದಾರೆ. ನಾವು ಆಗಸ್ಟ್ 15ರೊಳಗೆ ಎಲ್ಲ ಗ್ಯಾರಂಟಿ ಜಾರಿಗೊಳಿಸುತ್ತೇವೆ. 2013ರಲ್ಲಿ ಕಾಂಗ್ರೆಸ್ 165 ಭರವಸೆಗಳನ್ನು ನೀಡಿತ್ತು. ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ 158 ಭರವಸೆಗಳನ್ನು ಈಡೇರಿಸಲಾಗಿದೆ. ಬಿಜೆಪಿಯಿಂದ 2018ರಲ್ಲಿ 600 ಭರವಸೆ ಕೊಟ್ಟಿದ್ದರು. 2019ರಲ್ಲಿ ಅಧಿಕಾರಕ್ಕೆ ಬಂದು ಬಳಿಕ, ನಾಲ್ಕು ವರ್ಷ ಆಡಳಿತ ನಡೆಸಿದ್ದರು. 600 ಭರವಸೆಗಳಲ್ಲಿ ಅವರು ಕೇವಲ 60 ಭರವಸೆಗಳನ್ನು ಮಾತ್ರ ಜಾರಿಗೊಳಿಸಿದ್ದರು'' ಎಂದು ಬಿಜೆಪಿ ನಾಯಕರ ವಿರುದ್ಧ ಗರಂ ಆಗಿದ್ದರು.
ಇದನ್ನೂ ಓದಿ:Karnataka Budget: ಜುಲೈ 7ಕ್ಕೆ 3.25 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆಗೆ ಸಿದ್ಧತೆ.. ಪಂಚ ಗ್ಯಾರಂಟಿಗಾಗಿ ರಾಜಸ್ವ ಸಂಗ್ರಹದ ಟಾರ್ಗೆಟ್