ಹುಬ್ಬಳ್ಳಿ ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತೆಯಲ್ಲಿ ಯಾವುದೇ ಲೋಪವಿಲ್ಲ ಪೊಲೀಸ್ ಅಧಿಕಾರಿ ಹುಬ್ಬಳ್ಳಿ:ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಪ್ರಧಾನಿ ಮೋದಿ ರೋಡ್‌ಶೋ ನಡೆಸುತ್ತಿದ್ದಾಗ ಬಾಲಕನೊಬ್ಬ ಬ್ಯಾರಿಕೇಡ್ ಹಾರಿ ನುಗ್ಗಿದ್ದಾನೆ. ಬಳಿಕ ಮೋದಿ ಕಾರಿನತ್ತ ಯುವಕ ಧಾವಿಸಿದ ಹಾರವನ್ನು ನೀಡಿದ್ದಾನೆ. ಅಚ್ಚರಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಕನ ಅಭಿನಂದನೆಯನ್ನು ಸ್ವೀಕರಿಸಿದರು. ಆದರೆ ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತೆ ಲೋಪ ಕಂಡು ಬಂದಿದೆ ಎಂಬ ಆರೋಪವನ್ನು ಪೊಲೀಸ್ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.
ರಾಷ್ಟ್ರೀಯ ಯುವಜನೋತ್ಸವ ಪ್ರಪ್ರಥಮ ಬಾರಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ನಡೆಯುತ್ತಿದೆ. ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ಇಂದಿನಿಂದ ಐದು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆಗೆ ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮಿಸಿದ್ದರು. ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ವಾಗತಕೋರಿದರು.
ವಿಮಾನ ನಿಲ್ದಾಣ ಹೊರ ವಲಯದಲ್ಲಿ ಪ್ರಧಾನಿ ಮೋದಿ ಕಾರು ಇಳಿದು ಜನರತ್ತ ಕೈ ಬಿಸಿ ನಡೆಯುತ್ತಾ ಮುಂದೆ ಸಾಗಿದ್ದರು. ಈ ವೇಳೆ ಪ್ರಧಾನಿ ಮೋದಿ ಅವರನ್ನು ಕಂಡ ಉತ್ತರ ಕರ್ನಾಟಕದ ಜನರ ಉತ್ಸಾಹ ಇಮ್ಮಡಿಯಾಗಿತ್ತು. ಪ್ರಧಾನಿ ಮೋದಿ ಅವರು ಸಂಚರಿಸುವ ರಸ್ತೆ ಮಾರ್ಗದಲ್ಲಿ ಸಾರ್ವಜನಿಕ ಸಂಚಾರವನ್ನು ನಿಷೇಧಿಸಲಾಗಿತ್ತು.
ರೈಲ್ವೆ ಮೈದಾನದ ಮುಖ್ಯ ವೇದಿಕೆಯ ಸುತ್ತಲೂ ಭಾರಿ ಭದ್ರತೆ ಒದಗಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ 2,900 ಪೊಲೀಸರನ್ನು ನಿಯೋಜನೆ ಕೂಡಾ ಮಾಡಲಾಗಿತ್ತು. ನಗರದಲ್ಲಿ 7 ಎಸ್.ಪಿ ದರ್ಜೆ ಅಧಿಕಾರಿಗಳು, 25 ಡಿ.ಐ.ಎಸ್.ಪಿ ದರ್ಜೆ, 60 ಪಿಐ, 18 ಕೆ.ಎಸ್.ಆರ್.ಪಿ ಗರುಡಾ, ಸಿ.ಆರ್.ಡಿ.ಆರ್ ಸಿಬ್ಬಂದಿ ಪ್ರಧಾನಿಗೆ ಭದ್ರತೆ ನೀಡಿದ್ದರು. ಅಷ್ಟೇ ಅಲ್ಲ ರಸ್ತೆ ಉದ್ಧಕ್ಕೂ ಬ್ಯಾರಿಕೇಡ್ ಹಾಕಿ ಯಾರು ಒಳನುಸಳದಂತೆ ಭದ್ರತ್ತೆ ಒದಗಿಸಿದ್ದರು.
ಪೊಲೀಸ್ ಕಮೀಷನರ್ ರಮಣ್ ಗುಪ್ತಾ ಹೇಳಿಕೆ ಭದ್ರತೆ ನಡುವೆ ಮೋದಿಗೆ ಹಾರ ತಲುಪಿಸಿದ ಬಾಲಕ:ಆದರೆ ಬಾಲಕನೊಬ್ಬ ಬ್ಯಾರಿಕೇಡ್ ಹಾರಿ ಪ್ರಧಾನಿ ಮೋದಿಗೆ ಹೂವಿನ ಹಾರ ಹಾಕಿ ಸ್ವಾಗತಕೋರಲು ಮುಂದಾಗಿದ್ದ. ಕಾರಿನ ಬಾಗಿಲಿನ ಮೇಲಿಂದ ಹಾರವನ್ನು ಸ್ವೀಕರಿಸಲು ಪ್ರಧಾನಿ ಕೈ ಚಾಚಿದರು. ಈ ವೇಳೆ ಅಲ್ಲಿದ್ದ ಭದ್ರತಾ ಪಡೆಗಳು ಆ ಬಾಲಕನನ್ನು ತಡೆದು ಪ್ರಧಾನಿ ಮೋದಿಯಿಂದ ದೂರು ಕರೆದೊಯ್ಯುದರು. ಅಷ್ಟರಲ್ಲೇ ಮೋದಿ ಕೈಗೆ ಆ ಬಾಲಕನ ಹಾರ ಸಿಕ್ಕಿದ್ದು, ಬಳಿಕ ಆ ಹಾರವನ್ನು ಮೋದಿ ಭದ್ರತಾ ಪಡೆಗಳ ಕೈಗೆ ನೀಡಿದರು.
ಭಾರತ್ ಮಾತಾ ಕಿ ಜೈ ಘೋಷಣೆ :ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಸಂಚಾರಿ ಅಧಿಕಾರಿಗಳು ಬಾಲಕನನ್ನು ವಶಕ್ಕೆ ಪಡೆದು ದೂರ ಕರೆದೊಯ್ದರು. ಮಾರ್ಗದ ಉದ್ದಕ್ಕೂ ಮೋದಿಯವರು ನೆರೆದಿದ್ದ ಜನರತ್ತ ಕೈಬೀಸುತ್ತಾ ಸ್ವಾಗತಿಸಿದರು, ಅವರಲ್ಲಿ ಹಲವರು 'ಮೋದಿ, ಮೋದಿ' ಮತ್ತು 'ಭಾರತ್ ಮಾತಾ ಕಿ ಜೈ' ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿತು.
ಘಟನೆ ಬಗ್ಗೆ ಪೊಲೀಸರು ಹೇಳಿದ್ದಿಷ್ಟು: ಇಲ್ಲಿ ಪ್ರಧಾನಿಯವರ ಭದ್ರತೆಯಲ್ಲಿ ಅಂತಹ ಯಾವುದೇ ಲೋಪದೋಷವಾಗಿಲ್ಲ. ಪ್ರಧಾನಿ ಮೋದಿ ಅವರ ರೋಡ್‌ಶೋನಲ್ಲಿ ಬಾಲಕನೊಬ್ಬ ಹಾರ ಹಾಕಲು ಪ್ರಯತ್ನಿಸಿದರು. ನಾವು ಬಾಲಕನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ಹುಬ್ಬಳ್ಳಿ - ಧಾರವಾಡ ಅಪರಾಧ ವಿಭಾಗದ ಡಾ.ಗೋಪಾಲ್ ಬ್ಯಾಕೋಡ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಕಮೀಷನರ್ ರಮಣ್ ಗುಪ್ತಾ ಹೇಳಿದ್ದು ಹೀಗೆ: ರೋಡ್ ಶೋ ವೇಳೆ ನರೇಂದ್ರ ಮೋದಿ ಹೂಮಾಲೆ ಹಾಕಲು ಬಾಲಕನಿಂದ ಯತ್ನ ಪ್ರಕರಣ ಇದು ಭದ್ರತಾ ಲೋಪ ಅಲ್ಲ. ಲಕ್ಷಾಂತರ ಜನರು ಸೇರಿದ್ದರು. ಇಂತಹ ಸಂದರ್ಭದಲ್ಲಿ ಬಾಲಕ ಬ್ಯಾರಿಕೇಡ್ ಹಾರಿ ಬಂದಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರಮಣ್ ಗುಪ್ತಾ ಹೇಳಿದರು. ಬಾಲಕನೊಬ್ಬ ಬ್ಯಾರಿಕೇಡ್ ಹಾರಿ ಮೋದಿಯವರಿಗೆ ಮಾಲೆ ಹಾಕಲು ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬ್ಯಾರಿಕೇಡ್ ಹಾರಿ ಬಂದ ಬಾಲಕನನ್ನು ನಮ್ಮ ಭದ್ರತಾ ಸಿಬ್ಬಂದಿ ತಕ್ಷಣವೇ ತಡೆದಿದ್ದಾರೆ. ಅತಿ ಉತ್ಸಾಹದಿಂದ ಬಾಲಕ ಈ ರೀತಿ ಮಾಡಿದ್ದಾನೆ. ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ಪ್ರತಿಕ್ರಿಯೆ ನೀಡುವೆ ಎಂದು ಹೇಳಿದರು.
ಓದಿ:ಹುಬ್ಬಳ್ಳಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ.. ರೋಡ್ ಶೋ ನಡೆಸುತ್ತಿರುವ ಪ್ರಧಾನಿ