ಹುಬ್ಬಳ್ಳಿ:ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್‌ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯದ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಈಗ ಮತ್ತೊಂದು ಗೌರವದ ಗರಿ ಮುಡಿಗೇರಿಸಿಕೊಂಡಿದೆ. ರೈಲು ನಿಲ್ದಾಣದಲ್ಲಿರುವ 1,507 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.
ವಿಶ್ವದ ಅತಿ ಉದ್ದನೆಯ ರೈಲ್ವೆ ಫ್ಲಾಟ್‌ಫಾರ್ಮ್ ಇದಾಗಿದೆ. ಮಾರ್ಚ್ 12ರಂದು ಧಾರವಾಡದಲ್ಲಿ ಏರ್ಪಡಿಸಲಾಗಿದ್ದ ಐಐಟಿ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಇಲೆಕ್ಟ್ರಿಕ್ ಇಂಜಿನ್ ಅಳವಡಿಸಿದ್ದ ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್ ಮತ್ತು ಬೆಳಗಾವಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲುಗಳಿಗೂ ಹಸಿರು ನಿಶಾನೆ ತೋರಿಸಿದ್ದರು.
ಇದನ್ನೂ ಓದಿ:ಪ್ರಧಾನಿ ಮೋದಿಯಿಂದ 12ಕ್ಕೆ ವಿಶ್ವದ ಅತಿದೊಡ್ಡ ಹುಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್ ಲೋಕಾರ್ಪಣೆ
ಗೋರಖ್‌ಪುರ ನಿಲ್ದಾಣ ಹಿಂದಿಕ್ಕಿದ ಹುಬ್ಬಳಿ: ನೈಋತ್ಯ ರೈಲ್ವೆ ವಲಯದ ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿಪಡಿಸಿದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12ರಂದು ಲೋಕಾರ್ಪಣೆಗೊಳಿಸಿದ್ದಾರೆ.
10 ಮೀಟರ್ ಅಗಲ ಮತ್ತು 1,507 ಮೀಟರ್ ಉದ್ದದ ಪ್ಲಾಟ್‌ಫಾರ್ಮ್: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇದಕ್ಕೂ ಮುನ್ನ 1ನೇ ಪ್ಲಾಟ್‌ಫಾರ್ಮ್ 550 ಮೀಟರ್ ಉದ್ದ ಹೊಂದಿತ್ತು. ಇದೀಗ ಈ ಪ್ಲಾಟ್‌ಫಾರ್ಮ್‌ನ್ನು ವಿಸ್ತರಿಸಿ 10 ಮೀಟರ್ ಅಗಲ ಮತ್ತು 1,505 ಮೀಟರ್ ಉದ್ದ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಇದು ಸದ್ಯ ವಿಶ್ವದ ಅತಿ ಉದ್ಧದ ರೈಲ್ವೆ ಪ್ಲಾಟ್‌ಫಾರ್ಮ್ ಆಗಿ ದಾಖಲೆ ಬರೆದಿದೆ. ಈ ಮೂಲಕ 1,366 ಮೀಟರ್ ಉದ್ದದ ಗೋರಖ್‌ಪುರ ರೈಲು ನಿಲ್ದಾಣವನ್ನು ಹಿಂದಿಕ್ಕಿದೆ. ಈ ಮೊದಲು ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಎಂಬ ಹೆಗ್ಗಳಿಕೆಯನ್ನು ಗೋರಖ್‌ಪುರ ನಿಲ್ದಾಣ ಹೊಂದಿತ್ತು.
ಇಲ್ಲಿ ಏಕಕಾಲಕ್ಕೆ ವಿರುದ್ಧ ದಿಕ್ಕಿನಲ್ಲಿ ಎರಡು ರೈಲುಗಳು ಸಂಚರಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ರೈಲು ಸಂಚಾರಗಳಲ್ಲಿ ಸಮಯದಲ್ಲಿ ವಿಳಂಬ ಸಾಧ್ಯತೆ ಕಡಿಮೆ ಆಗಲಿದೆ.
ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ರೈಲು ಬರುವುದಿಲ್ಲ. ಪ್ಲಾಟ್ ಫಾರ್ಮ್ ಸಮಸ್ಯೆಯಿಂದ ಹೊರವಲಯದ ನಿಲ್ದಾಣದಲ್ಲಿ ಗಂಟೆಗಟ್ಟಲೆ ರೈಲುಗಳು ನಿಲ್ಲುತ್ತವೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿತ್ತು. ಇದೀಗ ಅತಿ ಉದ್ದದ ಪ್ಲಾಟ್‌ಫಾರ್ಮ್ ನಿರ್ಮಾಣದ ಮೂಲಕ ಈ ಸಮಸ್ಯೆಗಳಿಗೆ ಇತಿಶ್ರೀ ಸಿಗಲಿದೆ. ಪ್ಲಾಟ್ ಫಾರ್ಮ್ ವಿಸ್ತರಣೆಯಿಂದ ಸಾಕಷ್ಟು ಸಮಯ ಉಳಿತವಾಗಲಿದ್ದು, ಅಭಿವೃದ್ಧಿಗೂ ಇದು ಅಡಿಪಾಯ ಹಾಕಲಿದೆ. ಅಲ್ಲದೆ, ಆರ್ಥಿಕ ಚಟುವಟಿಕೆಗಳಿಗೂ ಮತ್ತಷ್ಟು ಪುಷ್ಠಿ ನೀಡಲಿದೆ.
ಸರಕು ಸಾಗಿಸಲು ಹಾಗೂ ಪಾರ್ಸಲ್ ಗೂಡ್ಸ್ ಸರ್ವಿಸ್ಗೆ ಈಗಾಗಲೇ ಪ್ರತ್ಯೇಕ ನಿಲ್ದಾಣವನ್ನು ನೈಋತ್ಯ ರೈಲ್ವೆ ಇಲಾಖೆ ನಿರ್ಮಾಣ ಮಾಡಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಪ್ಲಾಟ್‌ಫಾರ್ಮ್ ವಿಸ್ತರಣೆ ಯೋಜನೆ ಕೈಗೆತ್ತಿಕೊಂಡಿತ್ತು.
ಇದನ್ನೂ ಓದಿ: ವಿಶ್ವದ ಯಾವ ಶಕ್ತಿಯಿಂದಲೂ ಭಾರತದ ಪ್ರಜಾಪ್ರಭುತ್ವ ಪರಂಪರೆಗೆ ಹಾನಿಯಾಗಲ್ಲ: ಪ್ರಧಾನಿ ಮೋದಿ