ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಕಿಮ್ಸ್ ಒತ್ತಡ ನಿವಾರಣೆಗೆ ನಿರ್ಮಾಣವಾಗಲಿದೆ ಪ್ರತ್ಯೇಕ ಆಪರೇಷನ್ ಥಿಯೇಟರ್

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸಲುವಾಗಿಯೇ ಪ್ರತ್ಯೇಕ ಆಪರೇಷನ್ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿದ್ದು, 2021ರ ಡಿಸೆಂಬರ್ ವೇಳೆಗೆ ಈ ಹೊಸ ಕಟ್ಟಡ ರೋಗಿಗಳ ಸೇವೆಗೆ ಸಿದ್ಧಗೊಳ್ಳಲಿದೆ.

plan-to-build-a-separate-operation-theater
ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಪ್ರತ್ಯೇಕ ಆಪರೇಷನ್ ಥಿಯೇಟರ್ ನಿರ್ಮಿಸಲು ಯೋಜನೆ

By

Published : Sep 17, 2020, 2:45 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕ ರೋಗಿಗಳಿಗೆ ಸಂಜೀವಿನಿ ಎಂದೇ ಖ್ಯಾತಿ ಪಡೆದಿರುವ ವಾಣಿಜ್ಯನಗರಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮತ್ತು ವಿಜ್ಞಾನ ಸಂಸ್ಥೆ(ಕಿಮ್ಸ್) ಒತ್ತಡವನ್ನು ಕೊಂಚಮಟ್ಟಿಗೆ ನಿವಾರಣೆ ಮಾಡಿ ಸಾರ್ವಜನಿಕರಿಗೆ ಮತ್ತಷ್ಟು ಗುಣಮಟ್ಟದ ಸೇವೆ ನೀಡಲು ಮುಂದಾಗಿದೆ.

ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಪ್ರತ್ಯೇಕ ಆಪರೇಷನ್ ಥಿಯೇಟರ್ ನಿರ್ಮಿಸಲು ಯೋಜನೆ..

ಹೌದು, ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸಲುವಾಗಿಯೇ ಪ್ರತ್ಯೇಕ ಆಪರೇಷನ್ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ 2021ರ ಡಿಸೆಂಬರ್ ವೇಳೆಗೆ ಈ ಹೊಸ ಕಟ್ಟಡ ರೋಗಿಗಳ ಸೇವೆಗೆ ಸಿದ್ಧಗೊಳ್ಳಲಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ ವಿವಿಧ ವಿಭಾಗಗಳು ಒಳಗೊಂಡು 25 ಆಪರೇಷನ್ ಥಿಯೇಟರ್​ಗಳಿವೆ. ಹೊಸ ಕಟ್ಟಡದಲ್ಲಿ ಹೆಚ್ಚುವರಿ 12 ಥಿಯೇಟರ್​ಗಳು ಶಸ್ತ್ರ ಚಿಕಿತ್ಸೆಗೆ ಲಭ್ಯವಾಗಲಿವೆ. ಇದರಿಂದ ಈಗಿರುವ ಥಿಯೇಟರ್​ಗಳ ಮೇಲಿನ ಹೊರೆಯನ್ನು ತಗ್ಗಿಸಬಹುದಾಗಿದೆ.

ಸದ್ಯದ ತುರ್ತುಚಿಕಿತ್ಸಾ ವಿಭಾಗಕ್ಕೆ ಹೊಂದಿಕೊಂಡು 44/22 ಮೀಟರ್ ವಿಸ್ತೀರ್ಣದಲ್ಲಿ 5 ಮಹಡಿಯಲ್ಲಿ ಹೊಸ ಆಪರೇಷನ್ ಥಿಯೇಟರ್ ಕಟ್ಟಡ ತಲೆಎತ್ತಲಿದ್ದು, ಇದಕ್ಕಾಗಿ 28 ಕೋಟಿ ರೂ. ವ್ಯಯಿಸಲಾಗುತ್ತದೆ. ಈ ಕಟ್ಟಡದಿಂದ ಕಿಮ್ಸ್ ಗೆ ಹೆಚ್ಚುವರಿ 100 ಬೆಡ್​​ಗಳು ದೊರೆಯಲಿವೆ. ನೂತನ ಆಪರೇಷನ್ ಥಿಯೇಟರ್ ಕಟ್ಟಡದಲ್ಲಿ ಈಗಿರುವ ತುರ್ತು ಚಿಕಿತ್ಸಾ ವಿಭಾಗವನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಸದ್ಯ ತುರ್ತು ಚಿಕಿತ್ಸೆ ವಿಭಾಗದಲ್ಲಿ 10 ಬೆಡ್​ಗಳ ಸಾಮರ್ಥ್ಯ ಇದ್ದು, ಹೊಸ ಕಟ್ಟಡದಲ್ಲಿ 30 ಬೆಡ್​​ಗಳನ್ನು ಕಲ್ಪಿಸಲಾಗುತ್ತದೆ. ಇದರಿಂದ ತುರ್ತು ಚಿಕಿತ್ಸಾ ವಿಭಾಗದಲ್ಲಿನ ಒತ್ತಡ ನಿಭಾಯಿಸಬಹುದಾಗಿದೆ.

5 ಅಂತಸ್ತಿನ ಕಟ್ಟಡದ ಬೇಸ್​​ಮೆಂಟ್​​ನಲ್ಲಿ ಪಾರ್ಕಿಂಗ್ ಮತ್ತು ಕ್ಲೀನಿಂಗ್ ವಿಭಾಗಕ್ಕೆ ಮೀಸಲಿಡಲಾಗಿದೆ. ಗ್ರೌಂಡ್ ಫ್ಲೋರ್​ನಲ್ಲಿ ಕ್ಯಾಸ್ಯುಲಿಟಿ ವಿಭಾಗ ಇರಲಿದ್ದು, ಇಲ್ಲಿ ರೋಗಿಗಳ ಗುಣಲಕ್ಷಣಗಳ ಅನುಸಾರ 40 ಬೆಡ್ ಗಳಿರಲಿವೆ. ಅಂದರೆ, ಕಡಿಮೆ ತೀವ್ರತೆ, ತೀವ್ರತೆ, ಅತಿ ತೀವ್ರತೆ ಹೀಗೆ ಮೂರು ಬಗೆಯ ಗುಣಲಕ್ಷಣ ಹೊಂದಿದ ರೋಗಿಗಳಿಗೆ ರೆಡ್, ಗ್ರೀನ್ ಮತ್ತು ಯಲೋ ಪ್ರತ್ಯೇಕ ವಿಭಾಗಗಳನ್ನು ವಿಂಗಡಿಸಿ ಆಯಾ ತೀವ್ರತೆ ಅನುಗುಣವಾಗಿ ತ್ವರಿತ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ.

ಈಗಾಗಲೇ ಟೆಂಡರ್ ಪ್ರಕ್ರಿಯೆ ‌ಮುಗಿದಿದ್ದು, ಒಂದು ವರ್ಷದ ಕಾಲಾವಧಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮುಗಿಯುವ ಸಾಧ್ಯತೆ ಇದ್ದು, ಭೂಮಿ ಪೂಜೆ ಮಾತ್ರ ಬಾಕಿ ಇದೆ.

ABOUT THE AUTHOR

...view details