ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ನಾಯಿಗಳ ದಾಳಿ ಮುಂದುವರೆದಿದೆ. ಸಾಕು ನಾಯಿಯೊಂದು ವಿದ್ಯಾರ್ಥಿಯೋರ್ವನ ಮೇಲೆ ದಾಳಿ ನಡೆಸಿದೆ. ಪಿಟ್ಬುಲ್ ಜಾತಿಯ ಶ್ವಾನದ ದಾಳಿಗೆ ಸಿಲುಕಿ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಬಂಕಾಪುರ ಚೌಕ ಬಳಿಯ ಪಾಟೀಲ್ ಗಲ್ಲಿಯಲ್ಲಿ ನಡೆದಿದೆ.
ಪವನ ಅನಿಲ್ ದೊಡ್ಡಮನಿ ಎಂಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಟ್ಯೂಷನ್ಗೆ ಹೋಗುತ್ತಿದ್ದಾಗ ನಾಯಿ ದಿಢೀರ್ ಆಗಿ ಮೈಮೇಲೆರಗಿದೆ. ಗುರುಸಿದ್ದಪ್ಪ ಚನ್ನೋಜಿ ಎಂಬುವವರಿಗೆ ಸೇರಿದ ಶ್ವಾನ ಇದು ಎಂದು ಹೇಳಲಾಗಿದೆ. ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೀದಿ ನಾಯಿಗಳ ಜೊತೆಗೆ ಸಾಕು ನಾಯಿಗಳೂ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜನರು ಆಗ್ರಹಿಸಿದ್ದಾರೆ. ಈಗಾಗಲೇ ನಾಯಿ ಕಾರ್ಯಾಚರಣೆ ಆರಂಭಿಸಿರುವ ಪಾಲಿಕೆ, ಹಲವು ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದೆ. ಬೇಂಡಿಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ರಕ್ಕಸವಾಗ್ತಿರುವ ಬೀದಿ ನಾಯಿಗಳು.. ಶ್ವಾನಗಳ ಅಟ್ಟಹಾಸಕ್ಕೆ ಬಾಲಕ ಬಲಿ
ಪಿಟ್ಬುಲ್ ನಾಯಿಗಳನ್ನು ಸಾಕುವುದನ್ನು ಬಹುತೇಕ ಕಡೆ ನಿಷೇಧಿಸಲಾಗಿದೆ. ಆದರೂ ಹುಬ್ಬಳ್ಳಿಯಲ್ಲಿ ಅದನ್ನು ಸಾಕಲು ಅನುಮತಿ ಕೊಟ್ಟಿದ್ಯಾರು?. ಅದನ್ನು ಹುಬ್ಬಳ್ಳಿಗೆ ತಂದಿದ್ದು ಹೇಗೆ ಎನ್ನುವ ಪ್ರಶ್ನೆಗಳು ಎದುರಾಗಿವೆ. ಭಾರತದ ಬಹುತೇಕ ನಗರ ಪ್ರದೇಶದಲ್ಲಿ ಪಿಟ್ಬುಲ್ ನಿಷೇಧಿಸಲಾಗಿದೆ. ಹೀಗಾಗಿ, ನಾಯಿ ಮಾಲೀಕ, ನಾಯಿಸಮೇತ ಮನೆಗೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ.