ಹುಬ್ಬಳ್ಳಿ:ತೀವ್ರ ಕುತೂಹಲಕ್ಕೆ ಕಾರಣವಾದ ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕೊನೆಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಪ್ಪಿಗೆ ನೀಡಿದೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿಸುವ ಕುರಿತು ನಿನ್ನೆ ನಡೆದ ಸಭೆಯಲ್ಲಿ ವಿಷಯ ಮಂಡಿಸಲಾಯಿತು. ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದು, ಬಳಿಕ ಉತ್ಸವಕ್ಕೆ ಪಾಲಿಕೆ ಮೇಯರ್ ವೀಣಾ ಬರದ್ವಾಡ್ ಅನುಮತಿ ಕಲ್ಪಿಸಿದರು.
ಬಳಿಕ ಪ್ರತಿಕ್ರಿಯೆ ನೀಡಿದ ಮೇಯರ್ ವೀಣಾ ಬರದ್ವಾಡ್, ಕಳೆದ ವರ್ಷದಂತೆ ಈ ವರ್ಷವೂ ಗಣೇಶ ಪ್ರತಿಷ್ಠಾಪನೆಗೆ ಪರವಾನಗಿ ನೀಡಲಾಗಿದೆ. ರಾಣಿ ಚನ್ನಮ್ಮ ಗಜಾನನ ಮಂಡಳಿಗೆ 3 ದಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಟ್ಟಿದ್ದೇವೆ. ವಿರೋಧ ಪಕ್ಷದವರು ವಿರೋಧ ಮಾಡುವುದು ಸಹಜ. ಮಹಾನಗರ ಪಾಲಿಕೆಯ ಆಸ್ತಿಯಾಗಿದ್ದರಿಂದ ಪಾಲಿಕೆ ನಿರ್ಧಾರ ತೆಗೆದುಕೊಳ್ಳುತ್ತದೆ. ಹೈಕೋರ್ಟ್ ಆದೇಶದಂತೆ ಪಾಲಿಕೆ ಆಯುಕ್ತರು ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಪಾಲಿಕೆ ಆಯುಕ್ತರಿಗೆ ಈಗಾಗಲೇ ತಿಳಿಸಲಾಗಿದೆ. ಪ್ರತಿ ವರ್ಷ ನಮಾಜ್, ಧ್ವಜಾರೋಹಣಕ್ಕೆ ಇಲ್ಲಿ ಅವಕಾಶವಿದೆ. ಅದೇ ರೀತಿ ಗಣೇಶ ಪ್ರತಿಷ್ಠಾಪನೆಗೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.