ಹುಬ್ಬಳ್ಳಿ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುತ್ತಿದ್ದೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಆದರೆ, ಸೂರು ಕಳೆದುಕೊಂಡವರಿಗೆ ಬಿಡಿಗಾಸಿನ ಪರಿಹಾರ ನೀಡಿದೆ. ಬಿದ್ದಿರುವ ಮನೆಗಳಿಗೆ ಸರ್ಕಾರ ಐದು ಸಾವಿರ ರೂಪಾಯಿ ನೀಡಿದೆ. ಕಲ್ಲು ಹೊರ ಹಾಕುವ ಕೂಲಿಗೂ ಈ ಹಣ ಸಾಲಲ್ಲ ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ನೆಲಕಚ್ಚಿದ ಮನೆಗಳು: ಮುಂಗಾರು ಪೂರ್ವ ಸುರಿದ ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ ನೂರಾರು ಮನೆಗಳು ನೆಲಕಚ್ಚಿವೆ. ಇದರಿಂದ ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದ್ದು, ಸರ್ಕಾರ ಮಾತ್ರ ಬಿಡಿಗಾಸಿನ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಹಲವರಿಗೆ ಈ ಬಿಡಿಗಾಸು ಕೂಡ ತಲುಪಿಲ್ಲ. ಬರುವ ಪರಿಹಾರದದಿಂದ ಬಿದ್ದ ಮನೆ ಜಾಗದಲ್ಲಿ ಒಂದು ಸಣ್ಣ ಸೂರು ಕಟ್ಟಿಕೊಳ್ಳಬೇಕು ಎಂದುಕೊಂಡವರಿಗೆ ಬರಸಿಡಿಲು ಬಡದಂತಾಗಿದೆ.
ಮುಂಗಾರು ಪ್ರವೇಶಕ್ಕಿಂತ ಮೊದಲೇ ಭಾರೀ ಮಳೆಯಾಗಿದೆ. ಮೇ ತಿಂಗಳಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ನಷ್ಟವಾಗಿದೆ. ಬದುಕಿಗೆ ಆಶ್ರಯವಾಗಿದ್ದ ಸೂರು ಧರೆಗುರುಳಿದ್ದು, ದಿನದ ಕೂಲಿಯಲ್ಲಿ ಗಂಜಿ, ಅನ್ನ ತಿಂದು ನೆಮ್ಮದಿಯಿಂದ ಬದುಕುತ್ತಿದ್ದ ಕೆಲ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ.
ಐದು ಸಾವಿರ ಪರಿಹಾರ:ಮನೆಗೆ ಸರ್ಕಾರ ಒಂದಿಷ್ಟು ಪರಿಹಾರ ನೀಡಿದರೆ ನಾಲ್ಕು ಗೋಡೆ ಎಬ್ಬಿಸಿ ಮೇಲೆ ತಗಡಿನ ಶೀಟಾದರೂ ಹಾಕಿದರಾಯ್ತು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ದೊಡ್ಡ ಶಾಕ್ ನೀಡಿದೆ. ಬಿದ್ದಿರುವ ಮನೆಗಳಿಗೆ ಗರಿಷ್ಠ ಐದು ಸಾವಿರ ರೂಪಾಯಿ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಇದೀಗ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಕುಂದಗೋಳ ತಾಲೂಕಿನಲ್ಲಿಯೇ ನೂರಾರು ಅರ್ಜಿ ತಿರಸ್ಕೃತಗೊಂಡಿವೆ. ಮುಂಗಾರು ಪೂರ್ವ ಮಳೆಯ ಹಾನಿಗೆ ಕುಂದಗೋಳ ಜನತೆ ಅಕ್ಷರಶಃ ನಲುಗಿದ್ದರು. ಈ ತಾಲೂಕಿನಲ್ಲಿ ಮನೆಗಳ ಪರಿಹಾರ ಕೋರಿ ಸಲ್ಲಿಕೆಯಾದ 222 ಅರ್ಜಿಗಳ ಪೈಕಿ 191 ತಿರಸ್ಕಾರಗೊಂಡಿವೆ. ನವಲಗುಂದ ತಾಲೂಕಿನಲ್ಲಿ 143 ಅರ್ಜಿಗಳ ಪೈಕಿ ಕೇವಲ 24 ಮಾತ್ರ ತಿರಸ್ಕೃತಗೊಂಡಿವೆ. ಉಳಿದಂತೆ ಹುಬ್ಬಳ್ಳಿ ಗ್ರಾಮಾಂತರ ತಾಲೂಕು ವ್ಯಾಪ್ತಿಯಲ್ಲಿ 76 ಅರ್ಜಿಗಳು ಸಲ್ಲಿಕೆಯಾಗಿದ್ದವು ಇದರಲ್ಲಿ 37 ತಿರಸ್ಕೃತಗೊಂಡಿವೆ.