ಧಾರವಾಡ:ಜಿಲ್ಲೆಯ ನವಲಗುಂದ ಪುರಸಭೆ, ಅಳ್ನಾವರ ಮತ್ತು ಕಲಘಟಗಿ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಮೂರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೇ. 75 ಕ್ಕೂ ಹೆಚ್ಚು ಮತದಾನವಾಗಿದೆ.
ನವಲಗುಂದ ಪುರಸಭೆಯ 23 ವಾರ್ಡ್ಗಳಿಗೆ ಜರುಗಿದ ಚುನಾವಣೆಯಲ್ಲಿ 87 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 19512 ಮತದಾರರ ಪೈಕಿ 14658 ಮತದಾರರು ಮತ ಚಲಾಯಿಸಿದ್ದು, ಶೇ.75.12 ರಷ್ಟು ಮತದಾನವಾಗಿದೆ.
ಶಾಂತಿಯುತವಾಗಿ ನಡೆದ ಲೋಕಲ್ ಎಲೆಕ್ಷನ್ ಅಳ್ನಾವರ ಪಟ್ಟಣ ಪಂಚಾಯಿತಿಯ 18 ವಾರ್ಡ್ಗಳಿಗೆ ಜರುಗಿದ ಚುನಾವಣೆಯಲ್ಲಿ 76 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 15249 ಮತದಾರರ ಪೈಕಿ 9918 ಮತದಾರರು ತಮ್ಮ ಮತ ಚಲಾಯಿಸಿದ್ದು, ಶೇ.65.04 ರಷ್ಟು ಮತದಾನವಾಗಿದೆ.
ಶಾಂತಿಯುತವಾಗಿ ನಡೆದ ಲೋಕಲ್ ಎಲೆಕ್ಷನ್ ಕಲಘಟಗಿ ಪಟ್ಟಣ ಪಂಚಾಯಿತಿಯ 17 ವಾರ್ಡ್ಗಳ ಪೈಕಿ ವಾರ್ಡ ನಂ 16 ಕ್ಕೆ ಅವಿರೋಧ ಆಯ್ಕೆಯಾಗಿದೆ. ಉಳಿದ 16 ವಾರ್ಡ್ಗಳಿಗೆ ಜರುಗಿದ ಚುನಾವಣೆಯಲ್ಲಿ 47 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 12919 ಮತದಾರರ ಪೈಕಿ 9494 ಮತದಾರರು ತಮ್ಮ ಮತ ಚಲಾಯಿಸಿದ್ದು, ಶೇ. 77.87 ರಷ್ಟು ಮತದಾನವಾಗಿದೆ.
ಜಿಲ್ಲಾಧಿಕಾರಿಗಳ ಭೇಟಿ:
ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಅಳ್ನಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 7ಕ್ಕೂ ಹೆಚ್ಚು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಕಾರ್ಯ, ಮತಗಟ್ಟೆಗಳಿಗೆ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಅಳ್ನಾವರ ಚುನಾವಣಾಧಿಕಾರಿಯಾಗಿರುವ ಧಾರವಾಡ ತಹಶೀಲ್ದಾರ್ ಪ್ರಕಾಶ್ ಕುದರಿ ಹಾಗೂ ಅಳ್ನಾವರ ತಹಶೀಲ್ದಾರ್ ಅಮರೇಶ ಪಮ್ಮಾರ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಮೇ 31ರಂದು ಮತ ಎಣಿಕೆ:
ನವಲಗುಂದ ಪುರಸಭೆಗೆ ಜರುಗಿದ ಚುನಾವಣೆಯ ಮತ ಎಣಿಕೆಯು ನವಲಗುಂದ ಮಾಡೆಲ್ ಹೈಸ್ಕೂಲ್ನಲ್ಲಿ, ಅಳ್ನಾವರ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆಯು ಅಳ್ನಾವರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಹಾಗೂ ಕಲಘಟಗಿ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆಯು ಕಲಘಟಗಿ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಲಿವೆ. ಮೇ 31ರ ಮತ ಎಣಿಕೆ ಆರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.