ಹುಬ್ಬಳ್ಳಿ: ಪೇಸಿಎಂ ಕಾಂಗ್ರೆಸ್ನವರ ಕಾರ್ಬನ್ ಕಾಪಿ. ಅವರತ್ತು ಕಾಂಗ್ರೆಸ್ನವರು ಮಾಡಿದ್ದನ್ನೇ ಬಿಜೆಪಿಯವರು ಇವತ್ತು ಕಾಪಿ ಮಾಡುತ್ತಿದ್ದಾರೆ. ಪೇಸಿಎಂ ಅವತ್ತಿಗೆ ಲೇಟೆಸ್ಟ್ ಆಗಿತ್ತು. ಈಗ ಪೇಸಿಎಂಗೆ ಅರ್ಥವೇ ಇಲ್ಲ. ಜನ ಅದನ್ನು ನಂಬಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಟಾಂಗ್ ನೀಡಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದ ನಾಲ್ಕು ವರ್ಷಗಳ ಬಳಿಕ ಅಭಿಯಾನ ಆರಂಭವಾಗಿತ್ತು. ಆದರೆ ಕಾಂಗ್ರೆಸ್ ಬಂದ ಮೂರು ತಿಂಗಳಲ್ಲಿ ಬಿಜೆಪಿಯವರು ಮಾಡ್ತಾರೆ ಅಂದ್ರೆ ಅದಕ್ಕೆ ಅರ್ಥ ಇಲ್ಲ. ಬಿಜೆಪಿಯಲ್ಲಿದ್ದಾಗ ಎಲ್ಲ ವಿಷಯಗಳನ್ನು ನಾನು ಕೋರ್ ಕಮಿಟಿಯಲ್ಲಿ ಹೇಳಿದ್ದೆ. ಹೊರಗಡೆ ಹೇಳೋಕೆ ಆಗದ ವಿಷಯವನ್ನು ಹೇಳಿದ್ದೆ, ಆದ್ರೆ ಅವರು ತಿಳಿದುಕೊಳ್ಳಲಿಲ್ಲ ಎಂದರು.
ಲೋಕಸಭೆ ಚುನಾವಣೆಗೆ ನನಗೆ ಯಾವ ಟಾಸ್ಕ್ ಕೊಟ್ಟಿಲ್ಲ: ದೆಹಲಿ ಸಭೆಗೆ ನಾನು ಕೂಡ ಹೋಗಿದ್ದೆ. ಖುದ್ದು ರಾಹುಲ್ ಗಾಂಧಿ ಅವರೇ ಮೂರು ಗಂಟೆ ನಮ್ಮ ಜೊತೆ ಚರ್ಚೆ ಮಾಡಿದ್ದರು. ಲೋಕಸಭೆಯಲ್ಲಿ ಹೇಗೆ ನಾವು ಗೆಲ್ಲಬೇಕು ಅನ್ನೋದರ ಬಗ್ಗೆ ಚರ್ಚೆ ಆಯ್ತು. ಗ್ಯಾರಂಟಿ ಅನುಷ್ಠಾನದ ಬಗ್ಗೆಯೂ ಚರ್ಚೆ ಆಗಿದೆ. ರಾಜ್ಯ ರಾಜಕಾರಣದ ಬಗ್ಗೆ ಅವಲೋಕನ ಮಾಡಿ ರಾಹುಲ್ ಗಾಂಧಿ ತಿಳಿದುಕೊಂಡಿದ್ದಾರೆ. ನನಗೆ ಯಾವ ಟಾಸ್ಕ್ ಕೊಟ್ಟಿಲ್ಲ. ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಎಲ್ಲರದ್ದೂ ಒಂದೇ ಉದ್ದೇಶ, ಲೋಕಸಭೆಯಲ್ಲಿ ನಾವು 15 ರಿಂದ 20 ಸೀಟ್ ಗೆಲ್ಲಬೇಕು ಅನ್ನೋದು. ಬಿಜೆಪಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.