ಹುಬ್ಬಳ್ಳಿ:ನೈರುತ್ಯ ರೈಲ್ವೆ ವಲಯದಲ್ಲಿ ಸಂಚರಿಸುವ ಬಹುತೇಕ ಪ್ಯಾಸೆಂಜರ್ ರೈಲು ಗಾಡಿಗಳು ಹಳ್ಳಿಗಳಿಂದ ವಾಣಿಜ್ಯನಗರಿ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುತ್ತಿದ್ದವು. ಇದರಿಂದ ಹಳ್ಳಿಯ ಲಕ್ಷಾಂತರ ಕಾರ್ಮಿಕರು ಹುಬ್ಬಳ್ಳಿಗೆ ಕಟ್ಟಡ ಕೆಲಸಕ್ಕೆ ಹಾಗೂ ಇನ್ನಿತರ ಕೆಲಸಕ್ಕೆ ಆಗಮಿಸಿ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ, ಈಗ ಪ್ಯಾಸೆಂಜರ್ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆ ಹಳ್ಳಿಯಲ್ಲಿ ಕೆಲಸವಿಲ್ಲದೇ ಸಾಕಷ್ಟು ಜನರು ಮರೆಮಾಚಿದ ನಿರುದ್ಯೋಗ ಅನುಭವಿಸುವಂತಾಗಿದೆ.
ಅನ್ಲಾಕ್ ಬಳಿಕವೂ ಪ್ರಾರಂಭವಾಗದ ಪ್ಯಾಸೆಂಜರ್ ರೈಲು ಸೇವೆ: ಸಂಕಷ್ಟದಲ್ಲಿ ಕಾರ್ಮಿಕರು
ಅದು ಲಕ್ಷಾಂತರ ಕಾರ್ಮಿಕರ ಜೀವನಾಡಿಯಾಗಿ ಸೇತುವೆಯಂತೆ ಕೆಲಸ ಮಾಡುತ್ತಿದ್ದ ಸೇವೆ. ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡ ಸೇವೆ ಅನ್ ಲಾಕ್ ಬಳಿಕ ಕೂಡ ಶುರುವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಸಾಕಷ್ಟು ಬಡ ಕುಟುಂಬಗಳು ಈ ಸೇವೆಯನ್ನು ಎದುರು ನೋಡುತ್ತಿವೆ.
ಚಿಕ್ಕಜಾಜೂರು ರೈಲಿನ ಮೂಲಕ ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ಬಹುತೇಕ ಕಾರ್ಮಿಕರು ಸವಣೂರು, ಯಲವಿಗಿ, ಕಳಸ, ಗುಡಗೇರಿ, ಸಂಶಿ ಕುಂದಗೋಳ ಗ್ರಾಮೀಣ ಭಾಗದ ಜನರು ಹುಬ್ಬಳ್ಳಿಗೆ ಕೆಲಸಕ್ಕೆ ಆಗಮಿಸುತ್ತಿದ್ದರು. ಆದರೆ ಕೊರೊನಾ ಕರಿಛಾಯೆಯಿಂದ ಈಗ ಪ್ಯಾಸೆಂಜರ್ ರೈಲು ಸಂಪೂರ್ಣ ಸ್ಥಗಿತಗೊಂಡಿದೆ. ಬಸ್ ಪ್ರಯಾಣ ಮಾಡಿ ದುಡಿದು ಜೀವನ ನಡೆಸುವುದು ಕಷ್ಟದ ಸಂಗತಿಯಾಗಿದೆ. ಸಾರ್ವಜನಿಕರ ಆರ್ಥಿಕ ಹೊರೆ ತಗ್ಗಿಸಿ ಉತ್ತಮ ಸೇವೆ ನೀಡುತ್ತಿದ್ದ ಪ್ಯಾಸೆಂಜರ್ ರೈಲು ಸೇವೆ ಈಗ ಬಂದ್ ಆಗಿದ್ದು, ಪ್ರಾರಂಭಕ್ಕೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಈಗಾಗಲೇ ಎಲ್ಲೆಡೆಯೂ ಪ್ಯಾಸೆಂಜರ್ ರೈಲು ಪ್ರಾರಂಭಕ್ಕೆ ಒತ್ತಾಯಿಸುತ್ತಿದ್ದು, ರೈಲ್ವೆ ಸಚಿವಾಲಯ ಕೂಡಲೇ ಈ ಬಗ್ಗೆ ಗಮನ ಹರಿಸಿ ನೈಋತ್ಯ ರೈಲ್ವೆ ವಲಯಕ್ಕೆ ಸೂಚನೆ ನೀಡಿ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಸೆಯಾಗಿದೆ.