ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿ ದಿನೇ ದಿನೇ ಬೆಳೆಯುತ್ತಿದೆ. ಇಂಥ ದೊಡ್ಡ ನಗರದಲ್ಲಿ ಇದೀಗ ಪಾರ್ಕಿಂಗ್ ಸಮಸ್ಯೆಯಿಂದ ದಿನನಿತ್ಯ ಜನ ಹೈರಾಣಾಗುತ್ತಿದ್ದಾರೆ. ಕಳೆದ 5 ವರ್ಷದ ಹಿಂದೆ ಪಾಲಿಕೆ ಮಾಡಿದ್ದ ಸರ್ವೇ ಇದೀಗ ಮೂಲೆಗುಂಪಾಗಿದ್ದು ಜನರಿಗೆ ಪಾರ್ಕಿಂಗ್ ಜಾಗ ಹುಡುಕುವುದೇ ದೊಡ್ಡ ಸವಾಲಾಗಿದೆ.
ಹುಬ್ಬಳ್ಳಿಯ ಸುಮಾರು 300ಕ್ಕೂ ಹೆಚ್ಚು ಬೃಹತ್ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಹೀಗಾಗಿ ಕಳೆದ 5 ವರ್ಷದ ಹಿಂದೆಯೇ ಹು-ಧಾ ಮಹಾನಗರ ಪಾಲಿಕೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಕಟ್ಟಡಗಳ ಸರ್ವೇ ನಡೆಸಿ ಅಂಥ ಕಟ್ಟಡಗಳನ್ನು ಡೆಮಾಲಿಶ್ ಮಾಡುವ ಎಚ್ಚರಿಕೆಯನ್ನ ನೀಡಿತ್ತು. ಆದ್ರೆ ಅಲ್ಲಿಂದ ಇಲ್ಲಿಯವರೆಗೆ ಈ ಯೋಜನೆ ಕೇವಲ ನೋಟಿಸ್ಗೆ ಮಾತ್ರ ಸೀಮಿತವಾಗಿದೆ.
ವಾಣಿಜ್ಯ ನಗರಿಯಲ್ಲಿ ವಾಹನ ಪಾರ್ಕಿಂಗ್ಗಾಗಿ ಸಾರ್ವಜನಿಕರ ಪರದಾಟ ಇನ್ನು ಹುಬ್ಬಳ್ಳಿಯಲ್ಲಿ ಹಲವಾರು ವರ್ಷಗಳಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ವಾಹನ ಓಡಾಟವೇ ನಗರದಲ್ಲಿ ಕಷ್ಟಸಾಧ್ಯವಾಗಿದೆ.
ಕೆಲ ದೊಡ್ಡ ಕಟ್ಟಡಗಳ ಕೆಳಗೆ ಪಾರ್ಕಿಂಗ್ ವ್ಯವಸ್ಥೆ ಇದ್ದರೂ, ಸುಮಾರು 300ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಪಾರ್ಕಿಂಗ್ ಸ್ಥಳವೇ ಇಲ್ಲ. ಹಿಂದೆ ಕೊಟ್ಟ ಪಾಲಿಕೆಯ ನೋಟಿಸ್ಗೂ ಸಹ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದ್ದು, ಪಾಲಿಕೆ ಸರ್ವೇ ಕಾರ್ಯವೇ ಸಂಪೂರ್ಣ ಕಾಲಹರಣ ಎನ್ನುವಂತಾಗಿದೆ.
ಕೇವಲ ಬೀದಿ ಬದಿ ವ್ಯಾಪಾರಸ್ಥರ ಮೇಲೆ ದರ್ಪ ತೋರಿಸುವ ಪಾಲಿಕೆ ಅಧಿಕಾರಿಗಳು ಇನ್ನಾದ್ರೂ ದೊಡ್ಡ ಕಟ್ಟಡಗಳ ಮಾಲೀಕರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.