ಹುಬ್ಬಳ್ಳಿ : ಆರು ತಿಂಗಳೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಾಗಿ ಸರ್ಕಾರ ಹೇಳಿತ್ತು. ಒಂದು ವೇಳೆ ಕೊಡದೆ ಇದ್ದರೆ ಆಕ್ಟೋಬರ್ 1 ರಿಂದ ಮಾಡು ಇಲ್ಲವೇ ಮಡಿ ಹೋರಾಟ ಆರಂಭಿಸುತ್ತೇವೆ ಎಂದು ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಮೀಸಲಾತಿಗಾಗಿ ಪಂಚಮಸಾಲಿ 'ಮಾಡು ಇಲ್ಲವೇ ಮಡಿ' ಹೋರಾಟ ನಗರದಲ್ಲಿ ನಡೆದ ಪಂಚಮಸಾಲಿ ಸಮುದಾಯದ ದುಂಡುಮೇಜಿನ ಸಭೆ ಬಳಿಕ ಮಾತನಾಡಿದ ಅವರು, ಮೀಸಲಾತಿ ನೀಡದೆ ಇದ್ದರೆ ಮುಂದಿನ ದಿನಗಳಲ್ಲಿ 20 ಲಕ್ಷ ಜನ ಸೇರಿ ಸಮಾವೇಶವನ್ನ ಮಾಡುತ್ತೇವೆ. ರಾಜ್ಯ ಸರ್ಕಾರವನ್ನ ಎಚ್ಚರಿಸುತ್ತೇವೆ. ಈ ಬಾರಿ ಮಾಡು ಇಲ್ಲವೇ ಮಡಿ ಎನ್ನುವ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಮೀಸಲಾತಿ ಹೋರಾಟ ಯಾವತ್ತೂ ನಿಲ್ಲುವುದಿಲ್ಲ. ನಮ್ಮ ಉದ್ದೇಶ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕು ಎನ್ನುವುದು. ಇನ್ಯಾವುದೇ ವ್ಯಕ್ತಿಯನ್ನು ಶಾಸಕರನ್ನ, ಸಚಿವರನ್ನ, ಸಿಎಂರನ್ನ ಮಾಡೋದು ನಮ್ಮ ಉದ್ದೇಶವಲ್ಲ. ಎಷ್ಟೇ ಪೀಠಗಳು ಹುಟ್ಟಿದ್ರು ನಮ್ಮ ಕೂಡಲಸಂಗಮ ಪೀಠ ಮುಖ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಿ ಕೊಡುವುದು ನಮ್ಮ ಗುರಿ ಎಂದರು.
ಪಂಚ ನಿರ್ಣಯಗಳು
ದುಂಡು ಮೇಜಿನ ಸಭೆಯಲ್ಲಿ ತಗೆದುಕೊಂಡ ಐದು ನಿರ್ಣಯಗಳನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಗಳು ಮಂಡಿಸಿದರು.
- ಪಾದಯಾತ್ರೆಯ ಯಶಸ್ಸಿಗೆ ಸಹಕರಿಸಿದ್ದ ಸಿಎಂ ಬೊಮ್ಮಾಯಿವರಿಗೆ ಅಭಿನಂದನೆಗಳು
- ಸರ್ಕಾರ ನುಡಿದಂತೆ ನಡೆಯಲು ಅಗಸ್ಟ್ 26 ರಿಂದ ಸೆಪ್ಟೆಂಬರ್ 30 ರವರೆಗೆ, ಪಂಚಮಸಾಲಿ ಪ್ರತಿಜ್ಞಾ ಪಂಚಾಯಿತಿ ಅಭಿಯಾನ
- ಸರ್ಕಾರ ಕೊಟ್ಟ ಭರವಸೆಯಂತೆ ನಡೆದುಕೊಳ್ಳದಿದ್ದರೆ ಅಕ್ಟೋಬರ್ 1 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ
- ಕುರುಬ, ವಾಲ್ಮಿಕಿ, ಮಡಿವಾಳ, ಗಂಗಾಮತ, ಆದಿ ಬಣಜಿಗ, ಕುಡು ಒಕ್ಕಲಿಗ ಸಮಾಜದ ಬೇಡಿಕೆ ಈಡೇರಿಸುವಂತೆ ಬೆಂಬಲ
- ಸರ್ಕಾರದ ಜೊತೆ ಸಂಧಾನಕಾರರಾಗಿ ಮಾತುಕತೆ ನಡೆಸುವಂತೆ ಸಚಿವ ಸಿ.ಸಿ. ಪಾಟೀಲ್ಗೆ ಜವಾಬ್ದಾರಿ