ಹುಬ್ಬಳ್ಳಿ:ಪತ್ರಿಕೋದ್ಯಮ, ಸಾರಿಗೆ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಡಾ.ವಿಜಯ ಸಂಕೇಶ್ವರ ಅವರಿಗೆ ಪದ್ಮಶ್ರೀ ಒಲಿದು ಬಂದಿದೆ.
ವಿಜಯ ಸಂಕೇಶ್ವರ ಅವರು 1950 ಆಗಸ್ಟ್ 2 ರಂದು ಗದಗದಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದು ಪ್ರಸ್ತುತ ವಿಆರ್ಎಲ್ ಲಾಜಿಸ್ಟಿಕ್ ಲಿಮಿಟೆಡ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಮ್ಮ ಪರಿಶ್ರಮ ಹಾಗೂ ಶ್ರದ್ದೆಯಿಂದ ಯಶಸ್ವಿ ಉದ್ಯಮಿಯಾಗಿರುವ ಡಾ.ವಿಜಯ ಸಂಕೇಶ್ವರ, ತಮ್ಮ ವಿವಿಧ ಸಂಸ್ಥೆಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇವರ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಡಾ.ಸಂಕೇಶ್ವರ ಸಂತೋಷ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಕೊಡ ಮಾಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಪದ್ಮಶ್ರೀ ಕೂಡ ಒಂದು. ಇಷ್ಟು ದೊಡ್ಡ ಪ್ರಶಸ್ತಿ ನನಗೆ ಲಭಿಸುತ್ತೆ ಅನ್ನೋದನ್ನು ಕನಸಿನಲ್ಲೂ ನೆನೆಸಿರಲಿಲ್ಲ. ಭಾರತದ ಲಾರಿ ಉದ್ಯಮದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ವಾಹನ ಉಳ್ಳವರು ಯಾರೂ ಇಲ್ಲ. ಆದರೆ, ನಮ್ಮಲ್ಲಿ 5000 ವಾಹನ ಹಾಗೂ 1,200 ಶಾಖೆಗಳಿವೆ. ಇದೊಂದು ದೊಡ್ಡ ತಪಸ್ಸು. ಈ ತಪಸ್ಸಿನಲ್ಲಿ ನಮ್ಮ 20 ಸಾವಿರ ಸಿಬ್ಬಂದಿಯ ಶ್ರಮವಿದೆ. ದೇಶ-ವಿದೇಶದ ಟಾಪ್ 10 ಕಂಪನಿಗಳ ಜತೆ ತುಲನಾತ್ಮಕವಾಗಿ ನೋಡಿದಾಗ ನಾವು ನಂ.1 ಸ್ಥಾನದಲ್ಲಿದ್ದೇವೆ. ಅನೇಕ ಅಳತೆಗೋಲಿನಲ್ಲಿ ಮುಂಚೂಣಿಯಲ್ಲಿದ್ದೇವೆ. ಇದನ್ನೆಲ್ಲ ಸರ್ಕಾರ ಗಮನಿಸಿದೆ. ಈ ರೀತಿ ಸಾಧನೆ ಮಾಡಿರೋರು ಲಕ್ಷಾಂತರ ಜನ ಇದ್ದಾರೆ. ಅದರಲ್ಲಿ ನಾವೂ ಒಬ್ಬರು ಅನ್ನೊ ಹೆಮ್ಮೆಇದೆ. ಸಾಧನೆ ಮಾಡುವವರಿಗೆ ಕಿವಿಮಾತು ಉಪಯೋಗಕ್ಕೆ ಬರೋದಿಲ್ಲ. ನಮ್ಮ ಶ್ರಮ, ಶ್ರದ್ಧೆಯೇ ಉಪಯೋಗಕ್ಕೆ ಬರೋದು ಎಂದು ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಡಾ. ವಿಜಯ ಸಂಕೇಶ್ವರ ಅವರಿಗೆ ಪದ್ಮಶ್ರೀ ಘೋಷಣೆಯಾಗಿರುವ ಹಿನ್ನೆಲೆ ಮನೆಯಲ್ಲಿ ಹಬ್ಬದ ವಾತಾವರಣ ಕಂಡು ಬಂತು. ವಿವಿಧ ಗಣ್ಯರಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿದ್ದು, ಅಭಿಮಾನಿ, ಹಿತೈಷಿಗಳು ಸಿಹಿ ಹಂಚಿ ಸಂಭ್ರಮಿಸಿದರು.