ಧಾರವಾಡ:ಅಬ್ದುಲ್ ಖಾದರ್ ನಡಕಟ್ಟಿನ ಅವರು ಹುಟ್ಟು ರೈತನ ಮಗ, ಹೆಚ್ಚಿನ ವ್ಯಾಸಂಗ ಮಾಡದ ಈ ರೈತ ಓದಿರುವುದು ಎಸ್ಎಸ್ಎಲ್ಸಿವರೆಗೆ ಮಾತ್ರ. ಸಾಂಪ್ರದಾಯಿಕ ಕೃಷಿಗೆ ಆಧುನಿಕ ಸ್ಪರ್ಶದ ಮೂಲಕ ಹೊಸ ಸಾಧ್ಯತೆಯನ್ನು ಹುಟ್ಟು ಹಾಕಿದ ನಡಕಟ್ಟಿಯವರಿಗೆ ಇದೀಗ ಪದ್ಮಶ್ರೀ ಪ್ರಶಸ್ತಿ ಅರಸಿಕೊಂಡು ಬಂದಿದೆ.
ಹೌದು, ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ರೈತ ಅಬ್ದುಲ್ ಖಾದರ್ ನಡಕಟ್ಟಿನ ಅವರು ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಮಾರ್ಚ್ 3, 1953ರಲ್ಲಿ ಜನಿಸಿದ ಇವರು, ಶಿಕ್ಷಣ ಪಡೆದಿರುವುದು 10ನೇ ತರಗತಿವರೆಗಾದರೂ ಇವರ ಸಂಶೋಧನೆಗಳು ಎಲ್ಲೆಡೆ ಗಮನ ಸೆಳೆದಿವೆ. ನಡಕಟ್ಟಿನ ಕೂರಿಗೆ ಇದೀಗ ಎಲ್ಲೆಡೆ ಪ್ರಸಿದ್ದಿ ಪಡೆದಿದೆ. ಇದೆಲ್ಲ ಸಾಧನೆ ಗುರುತಿಸಿ ಕೇಂದ್ರ ಸರ್ಕಾರವು ಅಬ್ದುಲ್ ಖಾದರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ.
ಅಣ್ಣಿಗೇರಿ ಪಟ್ಟಣದ ಅಬ್ದುಲ್ ಖಾದರ್ ನಡಕಟ್ಟಿನ್ ಅವರಿಗೆ ಪದ್ಮಶ್ರೀ ಸಂಶೋಧನೆಗಳು:
ಅಬ್ದುಲ್ ನಡಕಟ್ಟಿನ ಅವರು ಪ್ರಮುಖವಾಗಿ ನಡಕಟ್ಟಿನ ಕೂರಿಗೆ, ಹುಣಸೆ ಹಣ್ಣಿನಿಂದ ಹುಣಸೆ ಬೀಜ ಬೇರ್ಪಡಿಸುವ ಯಂತ್ರ, ಎತ್ತಿನ ಚಕ್ಕಡಿಯನ್ನು ಆಟೋಮ್ಯಾಟಿಕ್ ಆಗಿ ಅನಲೋಡ್ ಮಾಡುವ ಚಕ್ಕಡಿ ಕಂಡು ಹಿಡಿದಿದ್ದಾರೆ. ಡಿಸೇಲ್ ಉಳಿತಾಯ ಮಾಡುವ ನಡಕಟ್ಟಿನ ಗಾಲಿ ಕುಂಟೆ ಸೇರಿದಂತೆ 10ಕ್ಕೂ ಹೆಚ್ಚು ಸಂಶೋಧನೆಗಳು ಇವರ ಗಮನಾರ್ಹ ಸಾಧನೆಯಾಗಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅಬ್ದುಲ್ ನಡಕಟ್ಟಿನ ಅವರು ಕೆಲವೇ ದಿನಗಳಲ್ಲಿ ಹುಣಸೇ ಹಣ್ಣಿನಲ್ಲಿರುವ ಬೀಜವನ್ನು ಪ್ರತ್ಯೇಕಿಸುವ ಯಂತ್ರವೊಂದನ್ನು ಆವಿಷ್ಕಾರ ಮಾಡಿದ್ದರು. ಇದರಿಂದ ಇವರ ತಾಯಿಯೂ ಸಾಕಷ್ಟು ಸಂಭ್ರಮ ಪಟ್ಟಿದ್ದರು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನೂರಾರು ಹುಣಸೆ ಗಿಡಗಳಿಂದ ಒಬ್ಬನೇ ವ್ಯಕ್ತಿ ಟ್ರ್ಯಾಕ್ಟರ್ ಮೂಲಕ ಹುಣಸೆ ಹಣ್ಣನ್ನು ಹರಿಯಬಲ್ಲ ಯಂತ್ರವನ್ನೂ ಸಂಶೋಧಿಸಿದರು.
ಈಗಾಗಲೇ ಇವರ ಸಾಧನೆಯನ್ನು ರಾಷ್ಟ್ರಪತಿ ಭವನವೂ ಸಹ ಗುರುತಿಸಿದೆ. ಇದೇ ಕಾರಣಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇವರಿಗೆ ‘ಜೀವಮಾನ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಿದ್ದರು. ಆದರೆ ನಡಕಟ್ಟಿನ ಅವರು ಎಂದೂ ಕೂಡ ಪ್ರಶಸ್ತಿಗಳ ಬಗ್ಗೆ ಯೋಚಿಸಿದವರಲ್ಲ.
ನಿತ್ಯವೂ ನಡಕಟ್ಟಿನ ಅವರನ್ನು ಹುಡುಕಿಕೊಂಡು ನೂರಾರು ರೈತರು ಇವರಿದ್ದಲ್ಲಿಗೆ ಬರುತ್ತಾರೆ. ಇದನ್ನು ನೋಡಿ, ಅನ್ನದಾತನ ಪ್ರೀತಿಯ ಮುಂದೆ ಅದ್ಯಾವ ದೊಡ್ಡ ಸರ್ಕಾರ, ದೊಡ್ಡ ಪ್ರಶಸ್ತಿ ಇದೆ ಅಂತ ಹೇಳುತ್ತಾರೆ ಅಬ್ದುಲ್ ಖಾದರ್. ಇದೀಗ ನಡಕಟ್ಟಿನ ಅವರ ಸಾಧನೆ ಗುರುತಿಸಿ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿದೆ. ಈ ಮೂಲಕ ಅಬ್ದುಲ್ ನಡಕಟ್ಟಿನ ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.
ಇದನ್ನೂ ಓದಿ:ದಲಿತ ಕವಿ ದಿ. ಸಿದ್ದಲಿಂಗಯ್ಯ ಸೇರಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪುರಸ್ಕಾರ