ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಅಬ್ದುಲ್ ಖಾದರ್ ನಡಕಟ್ಟಿನ್ ಈ ಬಾರಿಯ ಗಣರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಅಣ್ಣಿಗೇರಿ ಪಟ್ಟಣದ ರೈತಾಪಿ ಕುಟುಂಬದಿಂದ ಬಂದ ಇವರು ತಮ್ಮದೇ ಆದ ವಿಶೇಷತೆಗಳುಳ್ಳ ಕೂರಿಗೆ ಯಂತ್ರಗಳನ್ನ ಸಿದ್ಧಪಡಿಸಿ ಈ ಯಂತ್ರಗಳಿಂದಲೇ ಇಂದು ದೇಶದ ಗಮನ ಸೆಳೆದಿದ್ದಾರೆ.
ಮಳೆಗಾಲ ಬರುತ್ತಿದ್ದಂತೆಯೇ ರೈತರು ಕೃಷಿ ಚಟುವಟಿಕೆ ಶುರು ಮಾಡುತ್ತಾರೆ. ಒಮ್ಮೆಲೇ ಎಲ್ಲರೂ ಕೃಷಿ ಚಟುವಟಿಕೆ ಶುರು ಮಾಡೋದ್ರಿಂದ ಎತ್ತುಗಳ ಹಾಗೂ ಕೂಲಿ ಕಾರ್ಮಿಕರಿಗೆ ಭಾರಿ ಬೇಡಿಕೆ ಬರುತ್ತದೆ. ಹೊಲ ಸಮತಟ್ಟು ಮಾಡಲು, ಊಳಲು ಯಂತ್ರಗಳನ್ನು ಬಳಸಿಕೊಳ್ಳಬಹುದು. ಆದಾದ ಬಳಿಕ ಬಿತ್ತನೆ ಮಾಡಲು ಎತ್ತುಗಳ ಅಥವಾ ಕೃಷಿ ಕೂಲಿ ಕಾರ್ಮಿಕರ ಅವಶ್ಯಕತೆ ಇದ್ದೇ ಇರುತ್ತೆ. ಇದನ್ನು ಗಮನಿಸಿದ ನಡಕಟ್ಟಿನ್, ರೈತರಿಗೆ ಅತ್ಯವಶ್ಯಕವಾದ ಕೂರಿಗೆ, ಅಂದರೆ ಬಿತ್ತನೆ ಮಾಡೋ ಯಂತ್ರವನ್ನು ಕಂಡು ಹಿಡಿಯಬೇಕೆಂದು ನಿರ್ಧರಿಸಿದರು.
ಅತಿವೇಗವಾಗಿ ಉಳುಮೆ ಮಾಡುವ ಯಂತ್ರವನ್ನ ಕಂಡುಹಿಡಿಯಬೇಕು ಎಂಬ ಉದ್ದೇಶದಿಂದ ನಿರಂತರ ಪ್ರಯತ್ನ ಮಾಡಿ, ಕೂರಿಗೆ ಯಂತ್ರವನ್ನ ಕಂಡುಹಿಡಿದಿದ್ದಾರೆ. ಮೊದ ಮೊದಲು ಅಸ್ತಿಯನ್ನ ಮಾರಾಟ ಮಾಡಿ ಕೃಷಿ ಯಂತ್ರಗಳನ್ನ ತಯಾರು ಮಾಡುತ್ತಿದ್ದ ಇವರನ್ನು ಕಂಡು ಜನರು ಹುಚ್ಚ ಎಂದೂ ಸಹ ಕರೆದಿದ್ದರಂತೆ. ಆದ್ರೂ ರೈತರಿಗೆ ಅತ್ಯವಶ್ಯಕವಾದ ಕೂರಿಗೆ ಯಂತ್ರವನ್ನು ಕಂಡು ಹಿಡಿಯಬೇಕೆಂದು ನಿರ್ಧರಿಸಿದ ಇವರು, ಆರು ತಿಂಗಳು ಹಗಲು ರಾತ್ರಿ ಯೋಚಿಸಿ ಯಂತ್ರಕ್ಕೊಂದು ರೂಪ ನೀಡಿದ್ದಾರೆ.