ಧಾರವಾಡ : ಭಾರತ ಸರ್ಕಾರದ ವಿದೇಶಾಂಗ ಮಂತ್ರಾಲಯ ಮತ್ತು ವಾಣಿಜ್ಯ ಮಂತ್ರಾಲಯದಿಂದ ಬೇರೆ ಬೇರೆ ರಾಷ್ಟ್ರಗಳ ಜೊತೆ ಭಾರತದ ಉತ್ತಮ ಸಂಬಂಧ ಹೊಂದಿರುವುದರಿಂದ ಮತ್ತು ಜಾಗತಿಕ ಟೆಂಡರ್ ಮೂಲಕ ಆಕ್ಸಿಜನ್ ಆಮದು ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಪ್ರಾಕ್ಸಿಯರ್ (praxair) ಆಕ್ಸಿಜನ್ ಮರುಪೂರ್ಣ (ರೀಫಿಲ್ಲಿಂಗ್) ಘಟಕ್ಕೆ ಭೇಟಿ ನೀಡಿ, ಘಟಕದಿಂದ ಟ್ಯಾಂಕರ್ಗೆ ಆಕ್ಸಿಜನ್ ತುಂಬುವ ಕಾರ್ಯ ಪರೀಶಿಲನೆ ನಡೆಸಿ ಮಾತನಾಡಿದರು.
ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ಒಪ್ಪಂದವಾಗಿತ್ತು. ಅದನ್ನು ಧಾರವಾಡದಲ್ಲಿ ಸಂಗ್ರಹಿಸಿ, ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಇಲ್ಲಿಂದ ವ್ಯವಸ್ಥಿತವಾಗಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ.
ಅದರಂತೆ ಈಗಾಲೇ 50 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ. ಈ ಆಕ್ಸಿಜನ್‌ನ ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟ, ವಿಜಯಪುರ ಜಿಲ್ಲೆಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. ಇನ್ನುಳಿದ 25 ಮೆಟ್ರಿಕ್ ಟನ್ ಆಕ್ಸಿಜನ್ ಎರಡು ದಿನಗಳಲ್ಲಿ ಪೂರೈಕೆಯಾಗಲಿದೆ ಎಂದರು.