ಹುಬ್ಬಳ್ಳಿ:ಕಲಘಟಗಿ ತಾಲೂಕಿನಲ್ಲಿ ದಿನದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಜೋರಾಗಿದೆ. ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ಚಿರತೆಗಳ ಗುಂಪು ದಾಳಿ ಮಾಡಿ ಎತ್ತನ್ನು ತಿಂದು ಹಾಕಿರುವ ಘಟನೆ ನಡೆದಿದೆ. ಗ್ರಾಮದ ಮಲ್ಲಯ್ಯ ಶರಣಯ್ಯ ಗೋಡಿಮನಿ ಎಂಬವರು ಎತ್ತು ಕಳೆದುಕೊಂಡಿದ್ದಾರೆ.
ರಾತ್ರಿ ಹೊಲದ ಮನೆಯಲ್ಲಿ ಎರಡು ಎತ್ತುಗಳನ್ನು ಕಟ್ಟಿ ಹಾಕಿದ್ದರು. ಈ ಪೈಕಿ ಒಂದು ಕಾಣೆಯಾಗಿತ್ತು. ಬೆಳಿಗ್ಗೆ ತಾನಾಗಿಯೇ ಒಂದು ಎತ್ತು ಮನೆಯತ್ತ ಮರಳಿದೆ. ಆದ್ರೆ ಇನ್ನೊಂದು ಕಾಣದೇ ಇದ್ದಾಗ ರೈತ ಕಬ್ಬಿನ ಗದ್ದೆಯಲ್ಲಿ ಹುಡುಕಾಡಿದ್ದಾರೆ. ಆಗ ಒಂದು ತಾಯಿ ಚಿರತೆ ಹಾಗೂ ಎರಡು ಮರಿ ಚಿರತೆಗಳು ಸೇರಿ ಎತ್ತನ್ನು ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ತಿನ್ನುವುದನ್ನು ರೈತ ಕಂಡಿದ್ದಾರೆ. ನಂತರ ಪ್ರಾಣಭಯದಿಂದ ಅಲ್ಲಿಂದ ಓಡಿ ಬಂದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ದಾಳಿಯಿಂದ ಕಲಘಟಗಿ ತಾಲೂಕಿನ ರೈತರಲ್ಲಿ ಆತಂಕ ಮನೆ ಮಾಡಿದೆ. ಜನರು ತಮ್ಮ ಹೊಲ ಗದ್ದೆಗಳಿಗೆ ಕೆಲಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದು, ಇಲಾಖೆ ಸಿಬ್ಬಂದಿ ಕೂಡಲೇ ಚಿರತೆಗಳನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.