ಹುಬ್ಬಳ್ಳಿ:''ಕಾಂಗ್ರೆಸ್ ಸರ್ಕಾರ ನಾಲ್ವರು ಹಿಂದೂಗಳನ್ನು ಬಂಧಿಸಿ ಹೆದರಿಸೋಕೆ ನೋಡ್ತಿದೆ. ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರೋರು ಯಾರೂ ಇಲ್ಲ'' ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ''ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾದವರ ಆರೋಗ್ಯ ಸರಿಯಿರಲಿಲ್ಲ. ಅವರ ಎರಡು ಕೈ ಆಪರೇಶನ್ ಆಗಿವೆ. ಮೂರು ದಿನ ಕಾಲ ಕೋರ್ಟ್ ರಜೆ ಇರುವ ಸಮಯದಲ್ಲಿ ಬಂಧನ ಮಾಡಿ ಜೈಲಿಗೆ ಹಾಕಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರೋದಕ್ಕೆ ಹೊಟ್ಟೆ ಕಿಚ್ಚಿನಿಂದ ಕಾಂಗ್ರೆಸ್ನವರು ನಾಲ್ಕು ಜನ ಹಿಂದೂಗಳನ್ನು ಒಳಗೆ ಹಾಕಿದರೆ, ಯಾರು ಬರಲ್ಲ ಎಂದುಕೊಂಡಿದ್ದಾರೆ. ಕೂಡಲೇ ಶ್ರೀಕಾಂತ್ ಪೂಜಾರಿಯನ್ನು ಬಿಡುಗಡೆಗೊಳಿಸಬೇಕು. ಇನಸ್ಪೆಕ್ಟರ್ ಅಮಾನತು ಆಗಬೇಕು. ಬಿ ಕೆ ಹರಿಪ್ರಸಾದ ಅವರಿಗೆ ಮತಿಭ್ರಮಣೆ ಆಗಿದೆ'' ಎಂದರು.
''ದೇಶದಲ್ಲಿ ಬಿಜೆಪಿ ಸರ್ಕಾರ ಇದೆ. ನಾವು ಯಾವುದಕ್ಕೂ ಹೆದರಲ್ಲ. ನಮ್ಮ ವಕೀಲರು ಕೋರ್ಟ್ನಲ್ಲಿ ಬೇಲ್ಗಾಗಿ ಅರ್ಜಿ ಸಲ್ಲಿಸುತ್ತಾರೆ. ಪೊಲೀಸ್ ಅಧಿಕಾರಿ ದೌರ್ಜನ್ಯ ಮಾಡಿ ಹಿಂದೂ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಮತ್ತೆ ಜನವರಿ 9ರಂದು ದೊಡ್ಡ ಹೋರಾಟವನ್ನು ಮಾಡುತ್ತೇವೆ. ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ರೆ ಸಾಲದು. ಸಸ್ಪೆಂಡ್ ಮಾಡಲೇಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ, ಮತ್ತೆ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಅಶೋಕ್ ತಿಳಿಸಿದರು.