ಹುಬ್ಬಳ್ಳಿ:ಮಹಾತ್ಮ ಗಾಂಧಿಯವರು ಜಾರಿಗೆ ತಂದಿರುವ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಬಿಜೆಪಿಯವರು ಈಗ ರಾಜಕೀಯ ಲಾಭಕ್ಕಾಗಿ ನಾವು ಜಾರಿಗೆ ತಂದಿದ್ದೇವೆ ಎಂದು ಬಿಜೆಪಿಯ ಗ್ರಾಮ ಸ್ವರಾಜ್ಯ ಅಭಿಯಾನ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನಗರದಲ್ಲಿಂದು ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ವ್ಯವಸ್ಥೆ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಗ್ರಾಮದ ಆಡಳಿತ ಜನರ ಕೈಯಲ್ಲಿ ಇರಬೇಕೆಂದು ಈ ವ್ಯವಸ್ಥೆ ಜಾರಿಗೆ ತಂದಿದ್ದು ಕಾಂಗ್ರೆಸ್. ಆದರೆ ಬಿಜೆಪಿಯವರು ಯಾವತ್ತೂ ರಾಜಕೀಯ ಮೀಸಲಾತಿ ಪರವಾಗಿದ್ದವರಲ್ಲ ಎಂದು ಕಿಡಿಕಾರಿದರು.
ರಾಜಕೀಯ ಮೀಸಲಾತಿ ಕಾಂಗ್ರೆಸ್ ಕೊಡುಗೆಯಾಗಿದೆ. ಬಿಜೆಪಿಯವರಿಗೆ ಅಧಿಕಾರ ವಿಕೇಂದ್ರೀಕರಣ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಲ್ಲ. ಗ್ರಾಮ ಸ್ವರಾಜ್ಯ ಕಾಂಗ್ರೆಸ್ನ ಕೂಸು, ಅದು ಬಿಜೆಪಿಗೆ ಸಂಬಂಧವಿಲ್ಲ ಎಂದರು. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುತ್ತದೆ. ಹಣ ಚೆಲ್ಲಿ, ಅಧಿಕಾರ ದುರುಪಯೋಗಪಡಿಸಿಕೊಂಡು ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಬಹುಮತ ಪಡೆಯಲು ಸಾಧ್ಯವಿಲ್ಲ ಎಂದರು.