ಕರ್ನಾಟಕ

karnataka

ETV Bharat / state

ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೇವೆಗಳ ಅಂಗಡಿ ತೆರೆಯಲು ಅವಕಾಶ: ಶೆಟ್ಟರ್​ - ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್

ಕೊರೊನಾ ನಿಯಂತ್ರಿಸಲು ದೇಶದಾದ್ಯಂತ ಪ್ರಕರಣಗಳನ್ನು ಆಧರಿಸಿ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಳದಿ ಮತ್ತು ಹಸಿರು ಎಂದು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಅದೇ ರೀತಿ ಧಾರವಾಡ ಜಿಲ್ಲೆಯು ಕಿತ್ತಳೆ ವಲಯದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

Jagadishta Shetter
ಜಗದೀಶ ಶೆಟ್ಟರ್

By

Published : Apr 29, 2020, 3:25 PM IST

ಧಾರವಾಡ:ಜಿಲ್ಲೆಯು ಕಿತ್ತಳೆ ವಲಯದಲ್ಲಿದೆ. ಹುಬ್ಬಳ್ಳಿ ಶಹರ ಹೊರತುಪಡಿಸಿ ನಗರದಲ್ಲಿ ಕೆಲವು ಷರತ್ತುಗಳೊಂದಿಗೆ ಹಾಗೂ ಜಿಲ್ಲೆಯಾದ್ಯಂತ ಇತರ ತಾಲೂಕುಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಸೂಕ್ತ ಆರೋಗ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಾಕ್‍ಡೌನ್ ವಿನಾಯಿತಿಗಳ ಕುರಿತು ಜಿಲ್ಲೆಯ ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ನಿರ್ಣಯಿಸಿದಂತೆ ಧಾರವಾಡ ಜಿಲ್ಲೆ ಕಿತ್ತಳೆ ವಲಯದಲ್ಲಿ ಬರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲನೆ ನಡೆಸಿ ಲಾಕ್‍ಡೌನ್ ವಿನಾಯಿತಿಗಳ ಬಗ್ಗೆ ನಿರ್ಧರಿಸಲು ಸೂಚಿಸಲಾಗಿದೆ. ಜಿಲ್ಲೆಯ ಹುಬ್ಬಳ್ಳಿ ಶಹರದಲ್ಲಿ ಮಾತ್ರ ಕೋವಿಡ್ ಸಕ್ರಿಯ ಪ್ರಕರಣಗಳು ಇವೆ. ಹುಬ್ಬಳ್ಳಿ ಶಹರದಲ್ಲಿ ಪ್ರಸ್ತುತ ಇರುವ ಎಲ್ಲಾ ನಿರ್ಬಂಧಗಳು ಯಥಾವತ್ತು ಮುಂದುವರೆಯಲಿವೆ ಎಂದರು.

ಲಾಕ್‍ಡೌನ್ ವಿನಾಯಿತಿಗಳ ಕುರಿತು ಜಿಲ್ಲೆಯ ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಸಭೆ

ಧಾರವಾಡದಲ್ಲಿ ಪ್ರಾರಂಭದಲ್ಲಿ ಕಾಣಿಸಿಕೊಂಡಿದ್ದ ಒಂದು ಕೋವಿಡ್ ಪ್ರಕರಣ ಗುಣಮುಖವಾಗಿದೆ. ನಿಯಮಾನುಸಾರ ಕಂಟೈನ್‍ಮೆಂಟ್ ಪ್ರದೇಶವನ್ನೂ ಸಹ ನಿರ್ಬಂಧಗಳಿಂದ ಮುಕ್ತಗೊಳಿಸಲಾಗಿದೆ. ಈ ಕಾರಣಕ್ಕಾಗಿ ನಗರದಲ್ಲಿ ಮಾತ್ರ ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರ ದಿನಗಳಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳ ಕಾಯ್ದೆ ( ಶಾಪ್ಸ್ ಮತ್ತು ಎಸ್ಟಾಬ್ಲಿಷ್‍ಮೆಂಟ್ ಆ್ಯಕ್ಟ್) ಪ್ರಕಾರ ನೋಂದಣಿಯಾಗಿರುವ ಕೃಷಿ ಮತ್ತು ಕೈಗಾರಿಕೆ ಪೂರಕವಾಗಿರುವ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಇದೇ ರೀತಿಯಾಗಿ ಜಿಲ್ಲೆಯ ಕುಂದಗೋಳ, ನವಲಗುಂದ, ಅಣ್ಣಿಗೇರಿ, ಕಲಘಟಗಿ ಹಾಗೂ ಅಳ್ನಾವರ ತಾಲೂಕು ಕೇಂದ್ರಗಳು ಹಾಗೂ ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಪ್ರಕರಣಗಳು ಇಲ್ಲದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚಿಸಿರುವ ನಿಯಮಗಳನುಸಾರ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಮುಕ್ತವಾಗಿ ಎಂದಿನಂತೆ ವ್ಯಾಪಾರ, ವಹಿವಾಟುಗಳನ್ನು ನಡೆಸಬಹುದು ಎಂದರು.

ಕಾಮಗಾರಿಗಳ ಪುನರಾರಂಭ:

ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ ರಾಜ್, ಗ್ರಾಮಿಣ ಕುಡಿಯುವ ನೀರು, ಸಣ್ಣ ನೀರಾವರಿ, ಮಹಾತ್ಮ ಗಾಂಧಿ ನರೇಗಾ ಯೋಜನೆಗಳು ಹಾಗೂ ಕಳೆದ ಸಾಲಿನಲ್ಲಿ ಅನುಮೋದಿಸಲ್ಪಟ್ಟಿರುವ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಎಲ್ಲಾ ಚಾಲ್ತಿ ಕಾಮಗಾರಿಗಳನ್ನು ಮುಂದುವರೆಸಬಹುದು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂಟೈನ್​​​ಮೆಂಟ್​ ಪ್ರದೇಶ ಹೊರತುಪಡಿಸಿ ಪಾಲಿಕೆಯ ಅಪೆಂಡಿಕ್ಸ್ –ಇ,14ನೇ ಹಣಕಾಸು ಯೋಜನೆಯಡಿ ಕೈಗೊಳ್ಳಬಹುದಾದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ವಾನುಮತಿಯೊಂದಿಗೆ ಕೈಗೊಳ್ಳಬಹುದಾಗಿದೆ ಎಂದರು.

ಷರತ್ತುಗಳೊಂದಿಗೆ ಕೈಗಾರಿಕಾ ಚಟುವಟಿಕೆಗಳ ಪುನರಾರಂಭ:

ಅಗತ್ಯ ವಸ್ತುಗಳಡಿಯಲ್ಲಿ ಬರುವ ಎಲ್ಲಾ ಕೈಗಾರಿಕಾ ಚಟುವಟಿಕೆಗಳನ್ನು ಹುಬ್ಬಳ್ಳಿ ನಗರ ಹೊರತುಪಡಿಸಿ ಅವಳಿ ನಗರದ ಹೊರವಲಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭಿಸಬಹುದು. ಉದ್ಯಮ ಸಂಸ್ಥೆಗಳ ಮಾಲೀಕರು ಶೇ. 50ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರದ ನಿಯಮಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಕೈಗಾರಿಕಾ ಚಟುವಟಿಕೆಗಳಲ್ಲಿ ನಿಯಮಗಳ ಪಾಲನೆಯ ಬಗ್ಗೆ ನಿಗಾವಹಿಸಬೇಕು ಎಂದು ಸೂಚಿಸಿದರು.

ನಿರ್ಬಂಧ ಮುಂದುವರಿಕೆ:

ಲಾಕ್‍ಡೌನ್ ಜಾರಿಯಾದಾಗಿನಿಂದ ನಿರ್ಬಂಧಿಸಿರುವ ಸಾರ್ವಜನಿಕ ಸಾರಿಗೆ ಸೌಲಭ್ಯ ಇರುವುದಿಲ್ಲ. ಪಬ್, ಬಾರ್, ರೆಸ್ಟೋರೆಂಟ್, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಸಿನಿಮಾ ಮಂದಿರ, ಕಲ್ಯಾಣ ಮಂಟಪ, ಎಲ್ಲಾ ಧಾರ್ಮಿಕ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅವಕಾಶವಿಲ್ಲ. ಹೋಟೆಲ್‍ಗಳ ಮೂಲಕ ಪಾರ್ಸಲ್ ವಿತರಿಸಲು ಮಾತ್ರ ಅವಕಾಶವಿದೆ ಎಂದರು.

ABOUT THE AUTHOR

...view details