ಧಾರವಾಡ: ಕಂಕಣ ಸೂರ್ಯಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮುಂಜಾನೆ 8 ಗಂಟೆ 4 ನಿಮಿಷದಿಂದ 11 ಗಂಟೆ ಐದು ನಿಮಿಷದವರೆಗೆ ಗ್ರಹಣ ಗೋಚರಿಸುತ್ತಿದ್ದು, ಈ ಸಂದರ್ಭದಲ್ಲಿ ಧಾರವಾಡ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಯವರಿಗೂ ಅನುಕೂಲವಾಗುವಂತೆ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ: ಹೆಚ್ಚಿನ ಜನ ಸೇರುವ ನಿರೀಕ್ಷೆ ವೀಕ್ಷಣೆಗೆ ದೂರದರ್ಶಕಗಳನ್ನು ಅಳವಡಿಸಲಾಗಿದ್ದು, ಇನ್ನು ಸೆಲೆಸ್ಟ್ರಾನ್ ಟೆಲಿಸ್ಕೋಪ್ಗೆ ಕ್ಯಾಮರಾ ಅಳವಡಿಸಿ ಟಿವಿಗೆ ಕನೆಕ್ಟ್ ಮಾಡಲಾಗಿದೆ. ಡಾರ್ಕ್ ರೂಮಿನಲ್ಲಿ ದೊಡ್ಡ ಟಿವಿ ಅಳವಡಿಸಿ ಅಲ್ಲಿಂದ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಸೋಲಾರ್ ಗೋಗಲ್ಸ್, ಪಿನ್ ಹೋಲ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಇದೇ ಸಮಯದಲ್ಲಿ ಸೂರ್ಯನ ಮೇಲ್ಮೈ ಅಧ್ಯಯನ, ವಿಸ್ತಾರ, ಜೀವಿಗಳ ವರ್ತನೆ ಯಾವ ರೀತಿ ಇದೆ ಎನ್ನುವುದರ ಕುರಿತು ವೈಜ್ಞಾನಿಕವಾದ ಅಧ್ಯಯನ ಕೂಡ ನಡೆಯಲಿದೆ. ಈ ಕೇಂದ್ರದಲ್ಲಿರುವ ದೂರದರ್ಶಕಗಳ ಜೊತೆಗೆ ಬೆಂಗಳೂರಿನ ತಾರಾಲಯದಿಂದ ಎರಡು ವಿಶೇಷ ದೂರದರ್ಶಕಗಳನ್ನು ಸಹ ತರಿಸಲಾಗಿದ್ದು, 600 ವಿಶೇಷ ಕನ್ನಡಕಗಳು, ಪಿನ್ ಹೋಲ್ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ಗ್ರಹಣ ವೀಕ್ಷಿಸಲು ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.