ಹುಬ್ಬಳ್ಳಿ: ನಗರದ ಕಾಲೇಜೊಂದು ಗುರುತಿನ ಚೀಟಿಯನ್ನು ಕಡ್ಡಾಯ ಮಾಡುವ ಮೂಲಕ ಕಾಲೇಜು ಕ್ಯಾಂಪಸ್‌ನಲ್ಲಿ ಸಂಭವಿಸುವ ಅನಾವಶ್ಯಕ ಘಟನೆಗಳಿಗೆ ಬ್ರೇಕ್ ಹಾಕಿದೆ. ಈ ಮೂಲಕ ವಿದ್ಯಾರ್ಥಿಗಳ ರಕ್ಷಣೆ ಹಾಗೂ ಕಾಲೇಜಿನ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಹೌದು, ವಾಣಿಜ್ಯ ನಗರಿ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ಎಂದರೆ ನಗರದ ಯುವಕರು, ವೃದ್ಧರು, ಯುವಕ, ಯುವತಿಯರು ಹಾಗೂ ಮಕ್ಕಳಿಗೆ ಅಚ್ಚುಮೆಚ್ಚು. ಬೆಳಗ್ಗೆ ವಾಕಿಂಗ್ನಿಂದ ಹಿಡಿದು ರಾತ್ರಿ 10 ಗಂಟೆಯವರೆಗೂ ಕ್ಯಾಂಪಸ್ ಜನರಿಂದ ತುಂಬಿ ತುಳುಕುತ್ತಿತ್ತು. ಇದರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಯಾರು, ಬೇರೆ ಕಾಲೇಜಿನವರು ಯಾರು, ಸಾರ್ವಜನಿಕರು ಯಾರು ಎಂದು ಗುರುತಿಸುವುದೇ ದೊಡ್ಡ ಸವಾಲಾಗಿತ್ತು.
ಇದಕ್ಕೆ ಕಾಲೇಜು ಆಡಳಿತ ಮಂಡಳಿ ಬ್ರೇಕ್ ಹಾಕಿದ್ದು, ಸಾರ್ವಜನಿಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಪಾಸ್ ನೀಡಿದೆ. ಪಾಸ್ ತೋರಿಸಿದವರಿಗೆ ಮಾತ್ರ ಕಾಲೇಜು ಕ್ಯಾಂಪಸ್ ಒಳ ಪ್ರವೇಶಕ್ಕೆ ಅನುವು ಮಾಡಿಕೊಡುವ ಮೂಲಕ ಅನಾವಶ್ಯಕವಾಗಿ ತಿರುಗಾಡುವವರಿಗೆ ಕಡಿವಾಣ ಹಾಕಿದೆ. ಬಿವಿಬಿ ಕ್ಯಾಂಪಸ್‌ಗೆ ಭೇಟಿ ನೀಡುವ ಕ್ರೀಡಾಪಟುಗಳು, ವಾಕರ್ಸ್, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಇತರರಿಗೆ ಗುರುತಿನ ಚೀಟಿಗಳನ್ನು ಕೆಎಲ್ಇ ಸೊಸೈಟಿ ನೀಡಲಿದ್ದು, ಅವರ ಸುರಕ್ಷತೆಯನ್ನು ಖಚಿತ ಪಡಿಸುತ್ತದೆ. ಕ್ಯಾಂಪಸ್ ಒಳಗೆ ಹೋಗುವ ಪ್ರತಿಯೊಬ್ಬರ ಸಂಪರ್ಕ ವಿವರಗಳು ಮತ್ತು ಫೋಟೋಗಳನ್ನು ಸಂಗ್ರಹಿಸಲಾಗುತ್ತಿದೆ.