ಧಾರವಾಡ:ಅಧಿಕಾರ ಸ್ವೀಕರಿಸಿದ ದಿನವೇ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆ ನಗರದಲ್ಲಿ ನಿನ್ನೆ(ಸೋಮವಾರ) ನಡೆದಿದೆ. ಬಡ್ತಿ ಪಡೆದುಕೊಂಡು ಅಧಿಕಾರ ಸ್ವೀಕಾರ ಮಾಡಿದ್ದ ಅಧಿಕಾರಿ ಜಯಪ್ರಕಾಶ ಕಲಕೋಟಿ ಮೃತಪಟ್ಟವರು. ಇವರು ಧಾರವಾಡ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಹುದ್ದೆ ಅಲಂಕರಿಸಿದ್ದರು.
ನಿನ್ನೆ ಬೆಳಗ್ಗೆ ಅಧಿಕಾರ ಸ್ವೀಕಾರ ಮಾಡಿದ್ದರು. ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಮೊದಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ತಾಲೂಕು ಖಜಾನೆ ಕಚೇರಿಯಲ್ಲಿ ಜಯಪ್ರಕಾಶ ಕೆಲಸ ಮಾಡುತ್ತಿದ್ದರು. 15 ದಿನಗಳ ಹಿಂದೆ ಬಡ್ತಿ ಲಭಿಸಿತ್ತು. ಧಾರವಾಡ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ್ದರು. ಸಂಜೆ ಹೃದಯಾಘಾತ ಸಂಭವಿಸಿದ ನಂತರ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಹೃದಯಾಘಾತದಿಂದ ಹೆಡ್ ಕಾನ್ಸ್ಟೇಬಲ್ ಸಾವು:ವಿಜಯನಗರ ಜಿಲ್ಲೆಯ ತಾಲೂಕಿನ ಕಮಲಾಪುರದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ರಾಘವೇಂದ್ರ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮನೆಯ ಆಧಾರಸ್ತಂಭವನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿದೆ.
ರಾಘವೇಂದ್ರ ಅವರು 2005ರಲ್ಲಿ ಕಾನ್ಸ್ಟೇಬಲ್ ಆಗಿ ನೇಮಕಗೊಂಡಿದ್ದರು. ಕಳೆದ 18 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಇತ್ತೀಚಿಗಷ್ಟೇ ಬಳ್ಳಾರಿಯ ಲೋಕಾಯುಕ್ತ ಕಚೇರಿಯಿಂದ ಕಮಲಾಪುರ ಠಾಣೆಗೆ ವರ್ಗಾವಣೆಗೊಂಡಿದ್ದರು. ಹೆಡ್ ಕಾನ್ಸ್ಟೇಬಲ್ ಆಗಿ ಬಡ್ತಿ ಪಡೆದುಕೊಂಡು ಸೇವೆ ಸಲ್ಲಿಸುತ್ತಿದ್ದರು. ವಿಜಯನಗರದ ಎಸ್ಪಿ ಶ್ರೀಹರಿ ಬಾಬು ಬಿ ಎಲ್, ಡಿವೈಎಸ್ಪಿ ಮಂಜುನಾಥ್ ತಳವಾರ್, ಹಂಪಿ ಸಿಪಿಐ ಕೆ.ಶಿವರಾಜ್ ಅವರು, ರಾಘವೇಂದ್ರ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಇತ್ತೀಚೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೃದಯಾಘಾತದಿಂದ ನಿಧನ:ಶೋಭಾಯಾತ್ರೆಯ ನಿಮಿತ್ತ ಬಿಗಿ ಭದ್ರತೆ ಒದಗಿಸಲು ನಿಯೋಜನೆಯಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹರಿಯಾಣದ ನುಹ್ ಜಿಲ್ಲೆಯಲ್ಲಿ ಇತ್ತೀಚೆಗೆ ಜರುಗಿತ್ತು. ಹಕೀಮುದ್ದೀನ್ ಅವರು ಮೃತಪಟ್ಟ ಸಬ್ ಇನ್ಸ್ಪೆಕ್ಟರ್. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಕೀಮುದ್ದೀನ್ ಅವರನ್ನು ರಾಪಿಡ್ ಆ್ಯಕ್ಷನ್ ಫೋರ್ಸ್ ತಂಡದೊಂದಿಗೆ ಬದ್ಕಲಿ ಚೌಕ್‌ನಲ್ಲಿ ಬಿಗಿ ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ದಿಢೀರ್ ಹೃದಯಾಘಾತದಿಂದ ಹಕೀಮುದ್ದೀನ್ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿದ್ದವು. ಹಕೀಮುದ್ದೀನ್ ಅವರು ಇತ್ತೀಚೆಗಷ್ಟೇ ನಗೀನಾ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ಎಸ್ಹೆಚ್ಒ ಆಗಿ ನೇಮಕವಾಗಿದ್ದರು.
ಇದನ್ನೂ ಓದಿ:Food poisoning: ಚಿಕ್ಕೋಡಿ ಫುಡ್ ಪಾಯಿಸನ್ ಪ್ರಕರಣ.. ಓರ್ವ ಸಾವು