ಹುಬ್ಬಳ್ಳಿ : ಸಾರಿಗೆ ಬಸ್ನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಲಕ್ಷಾಂತರ ಮೌಲ್ಯದ ಒಡವೆ ಹಾಗೂ ನಗದು ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ ಮತ್ತು ಚಾಲಕರನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಅವರು ಅಭಿನಂದಿಸಿದ್ದಾರೆ.
ಉತ್ತರ ಕನ್ನಡ ವಿಭಾಗದ ಕಾರವಾರ ಬಸ್ ಡಿಪೋ ನಿರ್ವಾಹಕ ಹರೀಶ್ ಎನ್. ಹಾಗೂ ಚಾಲಕ ಸ್ಟೀಫನ್ ಫರ್ನಾಂಡೀಸ್ ಅವರು ಪ್ರಯಾಣಿಕರಿಗೆ 3.5 ರೂ. ಮೌಲ್ಯದ ಒಡವೆ, 1 ಲಕ್ಷ ರೂ. ನಗದು ಹಣ ಹಿಂದಿರುಗಿಸುವ ಮೂಲಕ ವ್ಯವಸ್ಥಾಪಕ ನಿರ್ದೇಶಕರಿಂದ ಅಭಿನಂದನೆಗೆ ಪಾತ್ರರಾದ ಚಾಲನಾ ಸಿಬ್ಬಂದಿಯಾಗಿದ್ದಾರೆ.
ಮೇ 29ರಂದು ಕಾರವಾರ ಡಿಪೊಗೆ ಸೇರಿದ ಬಸ್ ಚಿಕ್ಕಮಗಳೂರಿನಿಂದ ಕಾರವಾರಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕುಮಟಾ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಆಗ ಕಾರವಾರ ನಿವಾಸಿ ಅಬ್ದುಲ್ ಸತ್ತಾರ್ ಶೇಖ್ ಕುಟುಂಬದೊಂದಿಗೆ ಕಾರವಾರಕ್ಕೆ ಹೋಗಲು ತಮ್ಮ ಲಗೇಜ್ ಬ್ಯಾಗ್ಗಳೊಂದಿಗೆ ಬಸ್ ಹತ್ತಿದ್ದರು. ಆದರೆ ಬಸ್ ಫುಲ್ ಆಗಿದ್ದರಿಂದ ಕುಳಿತುಕೊಳ್ಳಲು ಆಗುವುದಿಲ್ಲವೆಂದು ಭಾವಿಸಿ, ಇಳಿದು ಬೇರೊಂದು ಬಸ್ನಲ್ಲಿ ಪ್ರಯಾಣಿಸಿದ್ದಾರೆ. ಆದರೆ ಬಸ್ನಿಂದ ಇಳಿಯುವಾಗ ಬ್ಯಾಗ್ ಬಿಟ್ಟು ತೆರಳಿದ್ದರು. ಸೀಟ್ ಮೇಲಿದ್ದ ಬ್ಯಾಗ್ ಅನ್ನು ನಿರ್ವಾಹಕ ಹರೀಶ್ ಗಮನಿಸಿದ್ದರು.
ಬಳಿಕ ಅಕ್ಕಪಕ್ಕದ ಪ್ರಯಾಣಿಕರನ್ನು ವಿಚಾರಿಸಿದಾಗ ತಮ್ಮದಲ್ಲ ಎಂದಿದ್ದಾರೆ. ನಂತರ ಸಹೋದ್ಯೋಗಿ ಚಾಲಕ ಸ್ಟೀಫನ್ ಫರ್ನಾಂಡೀಸ್ ಜೊತೆ ನೋಡಲಾಗಿ ಅದರಲ್ಲಿ ಚಿನ್ನದ ಒಡವೆ ಹಾಗೂ ನಗದು ಹಣ ಇರುವುದು ಕಂಡುಬಂದಿತ್ತು. ಕುಮಟಾ ಬಸ್ ನಿಲ್ದಾಣದಲ್ಲಿ ಒಂದು ಕುಟುಂಬ ಬಸ್ ಹತ್ತಿ, ಕೆಲಹೊತ್ತಲ್ಲೇ ಇಳಿದದ್ದನ್ನು ನೆನಪಿಸಿಕೊಂಡ ಸಿಬ್ಬಂದಿ, ಬ್ಯಾಗ್ನ್ನು ಡಿಪೊಗೆ ತಲುಪಿಸಿ ಮೇಲಾಧಿಕಾರಿಗಳ ಮೂಲಕ ವಾರಸುದಾರರಿಗೆ ಹಿಂದುರುಗಿಸಲು ನಿರ್ಧರಿಸಿದ್ದರು.