ಹುಬ್ಬಳ್ಳಿ : 2023ನೇ ಸಾಲಿನ ಸಾಮಾನ್ಯ ವರ್ಗಾವಣೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 9 ಸಾರಿಗೆ ವಿಭಾಗಗಳಿವೆ. 4,421 ಚಾಲಕರು, 2,992 ನಿರ್ವಾಹಕರು, 8,408 ಚಾಲಕ ಕಂ ನಿರ್ವಾಹಕರು, 2,844 ತಾಂತ್ರಿಕ ಸಿಬ್ಬಂದಿ ಹಾಗೂ 2,919 ಆಡಳಿತ ಸಿಬ್ಬಂದಿ ಸೇರಿದಂತೆ ಒಟ್ಟು 21,584 ನೌಕರರಿದ್ದಾರೆ.
2023ನೇ ಸಾಲಿನಲ್ಲಿ ವಿಭಾಗದೊಳಗೆ ಹಾಗೂ ಇತರೆ ವಿಭಾಗಗಳಿಗೆ ಸಾಮಾನ್ಯ ವರ್ಗಾವಣೆ ಬಯಸುವ ಅರ್ಹ ನೌಕರರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ. ವೆಬ್ಸೈಟ್ ಲಿಂಕ್ transfernwkrtc.in ಬಳಸಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕೊನೆಯ ದಿನವಾಗಿದೆ.
ವರ್ಗಾವಣೆ ಬಯಸುವ ಸಿಬ್ಬಂದಿ ಆನ್‌ಲೈನ್ ಮುಖಾಂತರವೇ ಅರ್ಜಿ ಸಲ್ಲಿಸುವುದು ಕಡ್ಡಾಯ. ನಂತರ ಅರ್ಜಿಯನ್ನು ಮುದ್ರಿಸಿಕೊಂಡು ಸಂಬಂಧಪಟ್ಟ ಪೂರಕ ದಾಖಲಾತಿಗಳೊಂದಿಗೆ ಘಟಕ ವ್ಯವಸ್ಥಾಪಕರು, ಕಾರ್ಯಸ್ಥಳದ ಮುಖ್ಯಸ್ಥರಿಗೆ ಸಲ್ಲಿಸಬೇಕು. ಈಗಾಗಲೇ ನೇರವಾಗಿ ಕೇಂದ್ರ ಕಚೇರಿಗೆ ಮ್ಯಾನ್ಯುವಲ್ ಅರ್ಜಿಗಳನ್ನು ಸಲ್ಲಿಸಿರುವವರೂ ಸಹ ಮತ್ತೊಮ್ಮೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ವರ್ಗಾವಣೆಗೆ ಕನಿಷ್ಠ ಅರ್ಹತೆಗಳು: ವರ್ಗಾವಣೆ ಬಯಸುವ ಸಿಬ್ಬಂದಿ ಸಂಸ್ಥೆಯಲ್ಲಿ ಖಾಯಂ ನೌಕರರಾಗಿರಬೇಕು. ಪ್ರಸ್ತುತ ಕಾರ್ಯಸ್ಥಳದಲ್ಲಿ ಪರೀಕ್ಷಾರ್ಥ ದಿನಾಂಕದಿಂದ ಅಥವಾ ಪ್ರಸ್ತುತ ಕಾರ್ಯಸ್ಥಳದಲ್ಲಿ ವರ್ಗಾವಣೆಯಾದ ದಿನಾಂಕದಿಂದ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿರಬೇಕು. ಯಾವುದೇ ಶಿಸ್ತು ಪ್ರಕರಣಗಳಲ್ಲಿ ಇಲಾಖಾ ವಿಚಾರಣೆ ಬಾಕಿ ಇರಬಾರದು. ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ, ಭಾಗಿಯಾಗಿರುವ ನೌಕರರು ಅರ್ಹರಿರುವುದಿಲ್ಲ.