ಕರ್ನಾಟಕ

karnataka

ETV Bharat / state

ವಾಯವ್ಯ ಸಾರಿಗೆಯ ಹುಬ್ಬಳ್ಳಿ ವಿಭಾಗಕ್ಕೆ 23 ಕೋಟಿ ರೂ ನಷ್ಟ

ಲಾಕ್​ಡೌನ್​ನಿಂದ ನಿರೀಕ್ಷೆಯಂತೆ ಎಲ್ಲಾ ವಲಯಗಳಲ್ಲೂ ನಷ್ಟವಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗಕ್ಕೆ 23 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

nwkrtc
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

By

Published : May 5, 2020, 8:24 PM IST

ಹುಬ್ಬಳ್ಳಿ:ಲಾಕ್​​ಡೌನ್ ಪರಿಣಾಮವಾಗಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿದ್ದರಿಂದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ ಅಂದಾಜು 23 ಕೋಟಿ ರೂಪಾಯಿ ನಷ್ಟವಾಗಿದೆ.

ಹುಬ್ಬಳ್ಳಿ ವಿಭಾಗದಲ್ಲಿ ನಾಲ್ಕು ಬಸ್ ಘಟಕಗಳಲ್ಲಿ ಒಟ್ಟು 462 ಬಸ್ಸುಗಳು ಹಾಗೂ 2,173 ಸಿಬ್ಬಂದಿಯಿದ್ದಾರೆ. ವಿಭಾಗದ ಬಸ್ಸುಗಳು ಪ್ರತಿದಿನ 1.90 ಲಕ್ಷ ಕಿಲೊಮೀಟರುಗಳಷ್ಟು ಕ್ರಮಿಸಿ 1.45 ಲಕ್ಷಗಳಷ್ಟು ಸಾರ್ವಜನಿಕ ಪ್ರಯಾಣಿಕರು ಹಾಗೂ 45 ಸಾವಿರಗಳಷ್ಟು ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಿದ್ದವು. ಈ ಮೂಲಕ ಸಂಸ್ಥೆಗೆ 45 ರಿಂದ 50 ಲಕ್ಷ ರೂ. ಸಾರಿಗೆ ಆದಾಯ ಸಂಗ್ರಹಣೆ ಆಗುತ್ತಿತ್ತು.

ಮಾರ್ಚ್​ ತಿಂಗಳ 9ರವರೆಗೆ ಬಸ್ಸುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿರಲಿಲ್ಲ. ಆದ್ದರಿಂದ ಆದಾಯ ಸಂಗ್ರಹಣೆ ನಿರೀಕ್ಷೆಯಂತಿತ್ತು. ನಂತರದಲ್ಲಿ ಕೊರೊನಾ ಮತ್ತು ಹೋಳಿ ಹಬ್ಬದ ಕಾರಣಕ್ಕೆ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಕುಸಿಯಿತು. ತತ್ಪರಿಣಾಮವಾಗಿ ಮಾರ್ಚ್​​ 22ರವರೆಗೆ ಬಸ್ಸುಗಳ ಸಂಖ್ಯೆಯೂ ಸಹ ದಿನದಿಂದ ದಿನಕ್ಕೆ ಕ್ಷೀಣಿಸತೊಡಗಿ 23ರಿಂದ ಶೂನ್ಯಕ್ಕಿಳಿಯಿತು.

ಮಾರ್ಚ್ ತಿಂಗಳಲ್ಲಿ ಭಾಗಶಃ ಬಸ್ ಕಾರ್ಯಾಚರಣೆಯಾಗಿದ್ದರಿಂದ ನಿರೀಕ್ಷಿತ ಸಾರಿಗೆ ಆದಾಯದಲ್ಲಿ 5.50 ಕೋಟಿಗಳಷ್ಟು ಕೊರತೆಯಾಗಿತ್ತು. ಆದರೆ ಏಪ್ರಿಲ್ ತಿಂಗಳಲ್ಲಿ ಯಾವುದೇ ಬಸ್ಸು ರಸ್ತೆಗೆ ಇಳಿಯದ ಕಾರಣದಿಂದ 17.50 ಕೋಟಿ ರೂಪಾಯಿ ಆದಾಯ ನಷ್ಟ ಉಂಟಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.

ABOUT THE AUTHOR

...view details