ಹುಬ್ಬಳ್ಳಿ :ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಎನ್‌ಡಬ್ಲ್ಯೂಕೆಆರ್‌ಟಿಸಿ) ಪ್ರಸ್ತುತ ವರ್ಷ 503 ಸಿಬ್ಬಂದಿಗಳು ಶ್ಲಾಘನೀಯ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಗದು ಬಹುಮಾನದ ಮೊತ್ತವನ್ನು ರೂ.500 ರಿಂದ ರೂ.2,000 ಕ್ಕೆ ಹೆಚ್ಚಿಸಿ ವ್ಯವಸ್ಥಾಪಕ ನಿರ್ದೇಶಕರ ಭರತ್ ಎಸ್. ಆದೇಶ ಹೊರಡಿಸಿದ್ದಾರೆ.
ಎನ್‌ಡಬ್ಲ್ಯೂಕೆಆರ್‌ಟಿಸಿ ವಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಗದಗ ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 9 ಸಾರಿಗೆ ವಿಭಾಗಗಳಿವೆ. ಒಟ್ಡು 20ಸಾವಿರಕ್ಕೂ ಹೆಚ್ಚು ನೌಕರರಿದ್ದಾರೆ. ಅವರಲ್ಲಿ ಸಂಸ್ಥೆ ಹಾಗೂ ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಶ್ಲಾಘನೀಯ ಹಾಗೂ ವಿಶೇಷ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯ ದಿನಾಚರಣೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪ್ರತಿ ಪ್ರಕರಣಕ್ಕೆ ತಕ್ಕಂತೆ ಇದುವರೆಗೂ ರೂ.500ರ ವರೆಗೆ ನಗದು ಬಹುಮಾನ ಮಂಜೂರು ಮಾಡಲಾಗುತ್ತಿತ್ತು. ಸದರಿ ಮೊತ್ತವನ್ನು 1999ರಲ್ಲಿ ನಿಗದಿಪಡಿಸಿದ್ದು, ಕಳೆದ 15 ವರ್ಷಗಳಿಂದ ಪರಿಷ್ಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಶ್ಲಾಘನೀಯ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ನೀಡುವ ನಗದು ಬಹುಮಾನದ ಮೊತ್ತವನ್ನು ರೂ.2,000 ಗಳಿಗೆ ಹೆಚ್ಚಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.
ಪ್ರಶಸ್ತಿಗೆ ಮಾನದಂಡಗಳು : ಏಪ್ರಿಲ್ 1 ರಿಂದ ಮಾರ್ಚ್ 31ರ ವರೆಗಿನ ಅವಧಿಯಲ್ಲಿ ಕನಿಷ್ಠ 258 ದಿನಗಳ ಹಾಜರಾತಿ ಹೊಂದಿರಬೇಕು. ಸಾರ್ವಜನಿಕ ಪ್ರಯಾಣಿಕರೊಂದಿಗೆ ಸೌಜನ್ಯಯುತ ನಡವಳಿಕೆ ಹೊಂದಿರಬೇಕು. ಅಪಘಾತ, ಅಪರಾಧ ಪ್ರಕರಣಗಳು ದಾಖಲಾಗಿರಬಾರದು. ಸಾರ್ವಜನಿಕ ದೂರುಗಳಿರಬಾರದು.