ಹುಬ್ಬಳ್ಳಿ:2023ನೇ ಸಾಲಿನ ಸಾಮಾನ್ಯ ಕೋರಿಕೆ, ಪರಸ್ಪರ ವರ್ಗಾವಣೆ ಹಾಗೂ ಪತಿ ಮತ್ತು ಪತ್ನಿ ಮತ್ತಿತರ ವಿಶೇಷ ಪ್ರಕರಣಗಳು ಸೇರಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಒಟ್ಟು 368 ಚಾಲಕ, ನಿರ್ವಾಹಕರುಗಳನ್ನು ವರ್ಗಾವಣೆ ಮಾಡಿ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್ ಆದೇಶ ಹೊರಡಿಸಿದ್ದಾರೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಟ್ಟಾರೆ ಹಾಗೂ ಕೆಲವು ವಿಭಾಗಗಳಲ್ಲಿ ಬಹಳಷ್ಟು ಚಾಲಕರ ಕೊರತೆ ಇದ್ದರೂ ಸಹ, ವರ್ಗಾವಣೆ ನಿರೀಕ್ಷೆಯಲ್ಲಿದ್ದ ಅರ್ಹ ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 2023ರ ಸಾಲಿಗೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ವರ್ಗಾವಣೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಆಗಸ್ಟ್ 23ರಿಂದ ಸೆಪ್ಟೆಂಬರ್ 4ರವರೆಗೆ ಒಟ್ಟು 1,003 ಚಾಲಕರು, ನಿರ್ವಾಹಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 727 ಮಂದಿ ಅರ್ಹರಿದ್ದರು. ಸಂಸ್ಥೆಯ ಒಂಬತ್ತು ವಿಭಾಗಗಳಲ್ಲಿ ಚಾಲನಾ ಸಿಬ್ಬಂದಿಗಳ ಮಂಜೂರಾತಿ, ಲಭ್ಯತೆ ಹಾಗೂ ಖಾಲಿ ಸ್ಥಾನ ಪರಿಗಣಿಸಿ 309 ಸಾಮಾನ್ಯ, 34 ಪರಸ್ಪರ ಹಾಗೂ 25 ವಿಶೇಷ ಪ್ರಕರಣಗಳು ಸೇರಿದಂತೆ ಒಟ್ಟು 368 ಅರ್ಹ ಚಾಲನಾ ಸಿಬ್ಬಂದಿಗಳನ್ನು ವರ್ಗಾಯಿಸಿ ಅಕ್ಟೋಬರ್ 6ರಂದು ಆದೇಶ ಹೊರಡಿಸಲಾಗಿದೆ.
ಆನ್‌ಲೈನ್ ಮೂಲಕ ಸಲ್ಲಿಕೆಯಾದ ಸಾಮಾನ್ಯ ವರ್ಗಾವಣೆ ಕೋರಿಕೆಗಳಲ್ಲಿ ಹೆಚ್ಚಿನವರು ಉತ್ತರ ಕನ್ನಡ ವಿಭಾಗದಿಂದ ಬೇರೆ ವಿಭಾಗಗಳಿಗೆ ವರ್ಗಾವಣೆ ಬಯಸಿದ್ದಾರೆ. ಅದೇ ರೀತಿ ಬೇರೆ ವಿಭಾಗಗಳಿಂದ ಬಾಗಲಕೋಟೆ ವಿಭಾಗಕ್ಕೆ ವರ್ಗಾವಣೆ ಕೋರಿದ್ದಾರೆ. ಉತ್ತರ ಕನ್ನಡ ವಿಭಾಗದಲ್ಲಿ ಚಾಲನಾ ಸಿಬ್ಬಂದಿ ಕೊರತೆ ಹೆಚ್ಚಾಗಿರುವುದರಿಂದ ಹಾಗೂ ಬಾಗಲಕೋಟೆ ವಿಭಾಗದಲ್ಲಿ ಚಾಲನಾ ಸಿಬ್ಬಂದಿ ಲಭ್ಯತೆ ಹೆಚ್ಚಿರುವುದರಿಂದ ಈ ಅರ್ಜಿಗಳಲ್ಲಿ ಪ್ರಸ್ತುತ ವಿಭಾಗದಲ್ಲಿ 8 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಕಾರ್ಯನಿರ್ವಹಿಸಿದ ಚಾಲನಾ ಸಿಬ್ಬಂದಿಗಳ ಕೋರಿಕೆಗಳನ್ನು ಮಾತ್ರ ಪರಿಗಣಿಸಲಾಗಿದೆ.