ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಜಿಲ್ಲೆಯ ಜನತೆಗೆ ಸಹಜವಾಗಿ ಆತಂಕ ಎದುರಾಗಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಹರಡಿರುವುದರಿಂದ ಸಮುದಾಯ ಮಟ್ಟಕ್ಕೂ ಹರಡಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 400ರ ಗಡಿಗೆ ಬಂದು ತಲುಪಿದೆ. ಮೊದ ಮೊದಲು ಒಂದೆರಡು ಕೇಸ್ ಮಾತ್ರ ದಾಖಲಾಗುತ್ತಿದ್ದ ಧಾರವಾಡ ಜಿಲ್ಲೆಯಲ್ಲಿ ಇದೀಗ 20-30 ಪ್ರಕರಣಗಳು ದೃಢವಾಗುತ್ತಿವೆ.
ಜಿಲ್ಲೆಯಲ್ಲಿ 400ರ ಸಮೀಪಕ್ಕೆ ಸೋಂಕಿತರ ಸಂಖ್ಯೆ: ಸಮುದಾಯಕ್ಕೆ ಹರಡಿದ್ಯಾ ಕೊರೊನಾ? ಇದರಿಂದ ಸಮುದಾಯಕ್ಕೆ ಕೊರೊನಾ ಹರಡಿದೆ ಎಂಬ ಮಾತುಗಳು ಕೇಳಿಬಂದರೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇದನ್ನು ಅಲ್ಲಗಳೆದಿದ್ದಾರೆ.
ಜನರು ಕೂಡಾ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡಾ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಮಾಸ್ಕ್ ಇಲ್ಲದೇ ಓಡಾಡುವವರ ಮೇಲೆ ಸಹ ಕಣ್ಣಿಟ್ಟಿದ್ದು, ಜಿಲ್ಲೆಯಲ್ಲಿ ಈಗಾಗಲೇ 40 ಸಾವಿರಕ್ಕೂ ಅಧಿಕ ಜನಕ್ಕೆ ದಂಡ ವಿಧಿಸಿ 2 ಲಕ್ಷಕ್ಕೂ ಅಧಿಕ ರೂಪಾಯಿ ವಸೂಲಿ ಮಾಡಲಾಗಿದೆ.
ಮನೆ ಮನೆಗೆ ಹೋಗಿ ಜನರಿಗೆ ಪತ್ರ ಹಂಚುವುದು. ಬೀದಿ ಬದಿ ನಾಟಕಗಳನ್ನು ಮಾಡುವ ಕೆಲಸವನ್ನು ಮಾಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಅತಿ ಹೆಚ್ಚು 25 ಸಾವಿರಕ್ಕಿಂತ ಹೆಚ್ಚು ಜನರಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಅತಿ ಹೆಚ್ಚು ಕೇಸ್ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.