ಹುಬ್ಬಳ್ಳಿ: ಇದು ರಾಜ್ಯದಲ್ಲಿನ ಪ್ರತಿಷ್ಠಿತ ಸಾರಿಗೆ ಸಂಸ್ಥೆ. ನಿತ್ಯ ಸಾವಿರಾರು ಜನರನ್ನು ಹೊತ್ತೊಯ್ದು ಸುರಕ್ಷಿತವಾಗಿ ಅವರವರ ಸ್ಥಳಗಳಿಗೆ ತಲುಪಿಸುವ ನಿಗಮ. ಆದರೆ, ಈ ಸಂಸ್ಥೆ ಇದೀಗ ಹಿಂದೆಂದಿಗಿಂತಲೂ ಅನುಭವಿಸಲಾರದ ನಷ್ಟ ಅನುಭವಿಸುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದು, ಸಂಸ್ಥೆ ಮತ್ತೆ ತನ್ನ ಆಸ್ತಿಯನ್ನು ಒತ್ತೆ ಇಟ್ಟು, ಸಾಲ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ರಾಜ್ಯ ಕಂಡ ಅತಿ ದೊಡ್ಡ ಸಾರಿಗೆ ಸಂಸ್ಥೆಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈಗ ಅಪಾರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿಂದೆ ಇದೇ ಸಾರಿಗೆ ಸಂಸ್ಥೆ ತನ್ನ ಆಸ್ತಿಯನ್ನು ಅಡವಿಟ್ಟು ಒಂದು ವರ್ಷದ ಹಿಂದೆ ಅಷ್ಟೇ 200 ಕೋಟಿ ರೂಪಾಯಿ ಸಾಲ ಪಡೆದಿತ್ತು. ಈ ಸಾಲದ ಹೊರೆ ಇನ್ನೂ ಕಡಿಮೆಯಾಗಿಲ್ಲ. ಇದರ ಬೆನ್ನಲ್ಲೇ ವಾಯುವ್ಯ ಸಾರಿಗೆ ಸಂಸ್ಥೆ ಮತ್ತೆ 300 ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾಗಿದೆ. ಈ ಸಂಸ್ಥೆ ನಿತ್ಯ ಸಾವಿರಾರು ಬಸ್ಸುಗಳ ಮೂಲಕ ಲಕ್ಷಾಂತರ ಜನರಿಗೆ ಸೇವೆ ನೀಡುತ್ತಿದೆ. ಆದರೆ ಕೊರೊನಾ ಹೆಮ್ಮಾರಿಯಿಂದ ವಾ.ಕ.ರ.ಸಾ ಸಂಸ್ಥೆ ನೂರಾರು ಕೋಟಿ ನಷ್ಟ ಅನುಭವಿಸುತ್ತಿದೆ.
ಪರಿಣಾಮವಾಗಿ ತಮ್ಮ ಸಿಬ್ಬಂದಿಗೆ ತಿಂಗಳ ವೇತನ ನೀಡಲು ಪರದಾಡುತ್ತಿದೆ. ಬ್ಯಾಂಕ್ ನಿಂದ 300 ಕೋಟಿ ಸಾಲ ಪಡೆಯಲು ಮುಂದಾಗಿದ್ದು, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕೇಂದ್ರ ಕಚೇರಿ, ಹೊಸ ಬಸ್ ನಿಲ್ದಾಣ ಹಾಗೂ ಪ್ರಾದೇಶಿಕ ಕಾರ್ಯಾಗಾರ ಸೇರಿದಂತೆ ಒಟ್ಟು 10 ಪ್ರಮುಖ ಆಸ್ತಿಗಳನ್ನು ಒತ್ತೆ ಇಟ್ಟು 7 ವರ್ಷಗಳ ಅವಧಿಗೆ ಸಾಲ ಪಡೆಯಲಿದೆಯಂತೆ.