ಮಾಹಿತಿ ನೀಡುತ್ತಿರುವ ಹುಬ್ಬಳ್ಳಿ ದಕ್ಷಿಣ ಉಪನೋಂದಣಾಧಿಕಾರಿ ಎಸ್ ಬಿ ಕೋಟಿ ಹುಬ್ಬಳ್ಳಿ: ಮಾರುಕಟ್ಟೆ ಮೌಲ್ಯ ಹಾಗೂ ಮಾರ್ಗಸೂಚಿ ದರ ಪರಿಷ್ಕರಣೆ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇದರ ಅಂತರ ತಗ್ಗಿಸಲು ರಾಜ್ಯ ಸರ್ಕಾರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆಸ್ತಿಗಳ ಮೌಲ್ಯ ಪರಿಷ್ಕರಣೆ ಮಾಡಲಾಗಿದ್ದರೂ ಕೂಡ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮಾರ್ಗಸೂಚಿ ದರ ಪರಿಷ್ಕರಣೆ ಬಳಿಕವೂ ಉಪನೋಂದಣಿಯಲ್ಲಿ ಏರಿಕೆಯಾಗುತ್ತಿದೆ ಎಂದು ಹುಬ್ಬಳ್ಳಿ ದಕ್ಷಿಣ ಉಪನೋಂದಣಾಧಿಕಾರಿ ಎಸ್.ಬಿ.ಕೋಟಿ ಮಾಹಿತಿ ನೀಡಿದ್ದಾರೆ.
ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಅವಳಿ ನಗರದಲ್ಲಿ ಎರಡು ಉಪನೋಂದಣಿ ಕಚೇರಿಗಳಿವೆ. ದಕ್ಷಿಣ ಉಪ ನೋಂಣಾಧಿಕಾರಿ ಕಚೇರಿ ಮತ್ತು ಉತ್ತರ ಉಪ ನೋಂದಣಾಧಿ ಕಚೇರಿಗಳ ನಡುವೆ ಹುಬ್ಬಳ್ಳಿ-ಧಾರವಾಡದ ಕೆಲವು ಭಾಗಗಳು ಹಂಚಿ ಹೋಗಿದೆ. ಪ್ರಾದೇಶಿಕತೆ, ಮೂಲಭೂತ ಸೌಕರ್ಯ, ಜನವಸತಿ ಪ್ರದೇಶಗಳ ಆಧಾರದ ಮೇಲೆ ಸ್ಥಿರಾಸ್ತಿ ಮೌಲ್ಯ ನಿರ್ಧರಿತವಾಗುತ್ತಿದೆ. ಅದರಲ್ಲೂ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಅವಳಿ ನಗರದಲ್ಲಿ ಪ್ರದೇಶವಾರು ಸ್ಥಿರಾಸ್ತಿ ಮೌಲ್ಯ-ಹೆಚ್ಚು ಕಡಿಮೆಯಾಗುತ್ತಿದೆ.
ಸರ್ಕಾರದ ಆದೇಶದಂತೆ ಎಷ್ಟು ಶುಲ್ಕ ವಿಧಿಸಬೇಕೆಂಬ ಮಾನದಂಡ ಇಟ್ಟುಕೊಂಡು ಪರಿಷ್ಕರಣೆ ಮಾಡಿಲ್ಲ. ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸ್ಥಿರಾಸ್ತಿ ಮೌಲ್ಯ ಹೆಚ್ಚಿದೆ. ಅಭಿವೃದ್ಧಿ ಇಲ್ಲದ, ಮೂಲ ಸೌಕರ್ಯಗಳಿಲ್ಲದ ಪ್ರದೇಶಗಳಲ್ಲಿ ಸ್ಥಿರಾಸ್ತಿ ಮೌಲ್ಯ ಕಡಿಮೆ ಇದೆ. ಆದರೆ, ಪರಿಷ್ಕರಣೆ ಮಾಡಿದರೂ ಕೂಡ ಆಸ್ತಿ ನೋಂದಣಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ, ಯಥಾಸ್ಥಿತಿಯಲ್ಲಿದೆ. ಅಕ್ಟೋಬರ್ನಲ್ಲಿ 1006 ನೋಂದಣಿಯಾಗಿದ್ದರೆ, ಸೆಪ್ಟೆಂಬರ್ನಲ್ಲಿ 1009 ನೋಂದಣಿಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಒಂದು ಟಾರ್ಗೆಟ್ ನೀಡಿದೆ. ರಾಜಸ್ವ ಸಂಗ್ರಹ 89.62 ಕೋಟಿ ಗುರಿ ನೀಡಿದೆ. ಆದರೆ, ಇಲ್ಲಿಯವರೆಗೂ 32 ಕೋಟಿ ರಾಜಸ್ವ ಸಂಗ್ರಹವಾಗಿದೆ. ಇನ್ನು 4-5 ತಿಂಗಳ ಕಾಲಾವಕಾಶವಿದೆ. ಸರ್ಕಾರ ನೀಡಿರುವ ಗುರಿ ಮುಟ್ಟುವ ವಿಶ್ವಾಸವಿದೆ ಎಂದು ಉಪನೋಂದಣಾಧಿಕಾರಿ ಎಸ್.ಬಿ.ಕೋಟಿ ಹೇಳಿದ್ದಾರೆ.
ಭೌತಿಕ ಬದಲಾವಣೆ ಮೇಲೆ ದರ ನಿಗದಿ:ನಗರದಲ್ಲಿ ಭೌತಿಕ ಬದಲಾವಣೆ ಮೇಲೆ ದರ ನಿಗದಿತ ಮಾಡಲಾಗಿದೆ. ಮೊದಲ ವಸತಿ ಪ್ರದೇಶ ಇದ್ದು, ಈಗ ವಾಣಿಜ್ಯ ಸಂಕೀರ್ಣಗಳಾಗಿದ್ದರೆ ಸಾಮನ್ಯವಾಗಿ ದರ ಬದಲಾವಣೆಯಾಗಿವೆ. ಹುಬ್ಬಳ್ಳಿ ದಕ್ಷಿಣ ಉಪನೋಂದಣಾಧಿಕಾರಿ ಕಚೇರಿಗೆ ವ್ಯಾಪ್ತಿಗೆ ಹಳೇ ಹುಬ್ಬಳ್ಳಿ ಭಾಗ ಹೆಚ್ಚು ಬರುವುದರಿಂದ ವಸತಿ ಪ್ರದೇಶವಿರುವುದರಿಂದ ಕಮರ್ಷಿಯಲ್ ಬರುವುದಿಲ್ಲ. ಗೋಕುಲ್ ರೋಡ್, ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ ಕಮರ್ಷಿಯಲ್ ಇರುವುದರಿಂದ ಹೆಚ್ಚಿನ ದರವಿದೆ.
ಅದರಂತೆ ಉತ್ತರ ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಹೆಚ್ಚಿನ ಸ್ಥಿರಾಸ್ತಿ ಮೌಲ್ಯವಿದೆ. ಕೇಶ್ವಾಪುರ, ನವನಗರ, ವಿದ್ಯಾನಗರ ಸೇರಿದಂತೆ ಪ್ರಮುಖ ಕಚೇರಿ, ವಿದ್ಯಾಸಂಸ್ಥೆಗಳು, ಅಪಾರ್ಟಮೆಂಟ್ ಹಾಗೂ ಲೇಔಟ್ಗಳು ಇರುವುದರಿಂದ ಅತೀ ಹೆಚ್ಚು ಮೌಲ್ಯವಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಮಾರ್ಗಸೂಚಿ ದರ ಪರಿಷ್ಕರಣೆ ಆಗಿರಲಿಲ್ಲ. ಈ ಹಿಂದೆ ಜನವರಿ 2019ರಿಂದ ಜಾರಿಗೆ ಬರುವಂತೆ ಶೇ. 5ರಿಂದ ಶೇ. 25ರವರೆಗೆ ಪರಿಷ್ಕರಣೆಯಾಗಿತ್ತು. ದೀರ್ಘಾವಧಿಗೆ ಭೂ ಮೌಲ್ಯ ಪರಿಷ್ಕರಣೆಯಾಗದ ಕಾರಣ ರಾಜ್ಯದಲ್ಲಿ ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ಮೌಲ್ಯದ ನಡುವಿನ ಅಂತರ ಹೆಚ್ಚಿತ್ತು. ಸರ್ಕಾರ ಈಗ ಸ್ಥಿರಾಸ್ತಿ ಮೌಲ್ಯದ ಪರಿಷ್ಕರಿಸುವ ಮೂಲಕ ಸ್ಥಿರಾಸ್ತಿ ಮೌಲ್ಯದ ನಡುವಿನ ಅಂತರ ಕಡಿಮೆ ಮಾಡಿದೆ. ನಿವೇಶನ ಮತ್ತು ಭೂಮಿಯು ಆದಾಯ ಗಳಿಕೆಗೆ ಹೂಡಿಕೆಯ ಮಾರ್ಗವಾಗಿರುವ ಹಿನ್ನೆಲೆ ಕೆಲವೆಡೆ ಭೂಮೌಲ್ಯ ಮಾರ್ಗಸೂಚಿ ದರಕ್ಕಿಂತ ದುಪ್ಪಟ್ಟಾಗಿದ್ದು, ಕಪ್ಪು ಹಣದ ವ್ಯವಹಾರ ಹೆಚ್ಚಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವೂ ಕೈತಪ್ಪಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2023 -24ನೇ ಸಾಲಿನ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿದೆ ಎಂದರು.
ಹೆಚ್ಚಲಿದೆ ಆದಾಯ ಗಳಿಕೆ: ಮಾರ್ಗಸೂಚಿ ದರ ಹೆಚ್ಚಳದಿಂದ ಸಹಜವಾಗಿಯೇ ಮುದ್ರಾಂಕ ಶುಲ್ಕ ದುಬಾರಿಯಾಗಿದೆ. ಇದರಿಂದ ಮುದ್ರಾಂಕ ಶುಲ್ಕ, ಸ್ವತ್ತಿನ ಮಾರುಕಟ್ಟೆ, ನೋಂದಣಿ ಶುಲ್ಕ, ಸ್ಕ್ಯಾನಿಂಗ್ ಶುಲ್ಕ ಸೇರಿದಂತೆ ಇತರ ಶುಲ್ಕಗಳು ಪರಿಷ್ಕರಣೆಯಾಗಿದೆ. ಲೆಕ್ಕಾಚಾರದಲ್ಲಿ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಆದಾಯ ಹರಿದು ಬರಲಿದೆ.
ಇದನ್ನೂ ಓದಿ:ಶಿವಮೊಗ್ಗ ಜಿಲ್ಲೆಗೆ 285 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ: ನೋಂದಣಿ, ಮುದ್ರಾಂಕ ದರ ಹೆಚ್ಚಳ