ಹುಬ್ಬಳ್ಳಿ:ಕೊರೊನಾ ವೈರಸ್ ವಿರುದ್ಧ ಕಿಮ್ಸ್ ವೈದ್ಯರು ಶ್ರದ್ಧೆಯಿಂದ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯವನ್ನು ವೈದ್ಯರು ಮಾಡುತ್ತಿದ್ದಾರೆ ಎಂದು ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಕಿಮ್ಸ್ ವೈದ್ಯರ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ್ - ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ್
ನಿನ್ನೆಯಷ್ಟೇ ಧಾರವಾಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಿತೇಶ ಪಾಟೀಲ್, ವೈದ್ಯರ ದಿನದ ಅಂಗವಾಗಿ ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಗೆ ಶುಭಾಶಯ ಕೋರಿದರು.
ಧಾರವಾಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಮೊದಲ ಬಾರಿಗೆ ಕಿಮ್ಸ್ಗೆ ಭೇಟಿ ನೀಡಿ ಮಾತನಾಡಿದ ಅವರು, ಜುಲೈ 01 ರಂದು ವೈದ್ಯರ ದಿನವಾಗಿರುವ ಹಿನ್ನೆಲೆ, ವೈದ್ಯರಿಗೆ ಜಿಲ್ಲಾಡಳಿತದಿಂದ ಶುಭಾಶಯ ತಿಳಿಸಲು ಬಂದಿದ್ದೇವೆ. ಕಿಮ್ಸ್ ವೈದ್ಯರು ಕೊರೊನಾ ವೈರಸ್ ವಿರುದ್ಧ ಉತ್ತಮವಾದ ಹೋರಾಟ ಮಾಡುತ್ತಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.
ನಾನು ನಿನ್ನೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಕೋವಿಡ್-19 ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಇಲ್ಲಿನ ವೈದ್ಯರು ಶ್ರಮವಹಿಸುತ್ತಿದ್ದಾರೆ ಎಂದು ತಿಳಿದಿದೆ. ಅಲ್ಲದೇ ಜಿಲ್ಲೆಯ ವಾಣಿಜ್ಯ ಚಟುವಟಿಕೆ ಸೇರಿದಂತೆ ಸ್ಮಾರ್ಟ್ ಸಿಟಿ ಹಾಗೂ ಧಾರವಾಡ ಜಿಲ್ಲೆಯ ಎಲ್ಲ ರೀತಿಯ ಯೋಜನೆ ಬಗ್ಗೆ ಕಾಳಜಿ ವಹಿಸಲಾಗುವುದು ಎಂದರು.