ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಗೆ ನೂತನ ಆಡಳಿತಾಧಿಕಾರಿ ನೇಮಕ ಧಾರವಾಡ : ಧಾರವಾಡದ ಪ್ರತಿಷ್ಠಿತ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಗೆ ನೂತನ ಆಡಳಿತಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಶಾಲಮ್ ಹುಸೇನ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಈರೇಶ ಅಂಚಟಗೇರಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದ್ದು, ಹುಸೇನ್ ಅಧಿಕಾರ ವಹಿಸಿಕೊಂಡಿದ್ದಾರೆ.
ಧಾರವಾಡ ಹಿಂದಿ ಪ್ರಚಾರ ಸಭಾ ಆಡಳಿತಾಧಿಕಾರಿಯಾಗಿ ಶಾಲಮ್ ಹುಸೇನ್ ಅಧಿಕಾರ ವಹಿಸಿಕೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದಂತೆ ನಿನ್ನೆ ಉಪವಿಭಾಗಾಧಿಕಾರಿ ಅಧಿಕಾರ ವಹಿಸಿಕೊಂಡರು. ಇದರಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಪ್ತ ಈರೇಶ ಅಂಚಟಗೇರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ.
2020 ರಲ್ಲಿಯೇ ಆಡಳಿತಾಧಿಕಾರಿ ಚುನಾವಣೆ ನಡೆಸುವಂತೆ ಆದೇಶ ನೀಡಲಾಗಿತ್ತು. ಅಂದು ಚುನಾವಣೆ ನಡೆಸದೇ ತಾವೇ ಅಧ್ಯಕ್ಷರಾಗಿ ಜೋಶಿ ಆಪ್ತ ಈರೇಶ ಅಂಚಟಗೇರಿ ಮುಂದುವರೆದಿದ್ದರು. ಇದನ್ನು ಕೆಲವರು ಪ್ರಶ್ನಿಸಿದ್ದರು. ಸಹಕಾರ ಸಂಘಗಳ ಉಪ ನಿಯಮಕ್ಕೆ ವಿರುದ್ಧವಾಗಿ ಚುನಾವಣೆ ನಡೆಸಿ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ರಾಯಪ್ಪ ಬಾಳಪ್ಪ ಪುಡಕಲಕಟ್ಟಿ ಮತ್ತು ಮಲ್ಲಪ್ಪ ಪುಡಕಲಕಟ್ಟಿ ಮನವಿ ಸಲ್ಲಿಸಿದ್ದರು. ಸದ್ಯಕ್ಕೆ 6 ತಿಂಗಳವರೆಗೆ ಶಾಲಮ್ ಹುಸೇನ್ ಅವರನ್ನು ಆಡಾಳಿತ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಈ ಬಗ್ಗೆ ಹಿಂದೆ ಅಧ್ಯಕ್ಷರಾಗಿದ್ದ ಈರೇಶ ಅಂಚಟಗೇರಿ ಮಾತನಾಡಿ, ಇದು ಭಾರತ ಸರ್ಕಾರದ ಸಂಸ್ಥೆ. ಈಗಾಗಲೇ ಚುನಾವಣೆ ಆಗಿದೆ. ಆದರೆ, ಚುನಾವಣೆ ಆಗಿಲ್ಲ ಎಂದು ತಪ್ಪು ಮಾಹಿತಿ ಕೊಡಲಾಗುತ್ತಿದೆ. ಇದಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ, ಕೇಂದ್ರ ಸಚಿವ ವಿ. ಮುರಳಿಧರ ಅವರು ಅಧ್ಯಕ್ಷರಾಗಿದ್ದಾರೆ. ಭಾರತ ಸರ್ಕಾರದ ಯಾವುದೇ ಸಂಸ್ಥೆಯನ್ನು ಈ ರೀತಿ ಸ್ವಾಧೀನಕ್ಕೆ ಪಡೆದುಕೊಳ್ಳುವ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಇದನ್ನೂ ಓದಿ :ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಹಿಂದಿನ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್