ಧಾರವಾಡ:ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಹಾಗೂ ಮನೆ ಹಾನಿ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ಧೋರಣೆ ತೋರುತ್ತಿದೆ ಎಂದು ಆರೋಪಿಸಿ ರೈತರು ಹಾಗೂ ಸಂತ್ರಸ್ತರು ಪ್ರತಭಟನೆ ನಡೆಸಿದರು.
ನೆರೆ ಹಾನಿ ಪರಿಹಾರ ವಿಳಂಬದ ವಿರುದ್ಧ ಪ್ರತಿಭಟನೆ ತಾಲೂಕಿನ ಯಾದವಾಡ ಗ್ರಾಮದ ರೈತರು, ಸಂತ್ರಸ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದು, ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಥಳಕ್ಕೆ ಬರುವರೆಗೂ ಹೋರಾಟ ಹಿಂಪಡೆಯಲು ನಿರಾಕರಿಸಿದರು.
ನಂತರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಸಮಸ್ಯೆ ಆಲಿಸಿದರು.
ಸುಮಾರು 7ತಿಂಗಳು ಕಳೆದರೂ ಫಲಾನುಭವಿಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ವಿಷಯವಾಗಿ ಎರಡನೇ ಬಾರಿ ಪ್ರತಿಭಟನೆ ನಡೆಸುತ್ತಿದ್ದೇವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗದಿದ್ದರೆ, ಮುಂಬರುವ ದಿನಗಳಲ್ಲಿ ಸಂಸದರು, ಶಾಸಕರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳಿಗೆ ಘೇರಾವ್ ಹಾಕುವುದಾಗಿ ಗ್ರಾಮಸ್ಥರು ನಿರ್ಧರಿಸಿದ್ದೇವೆ ಎಂದು ಎಚ್ಚರಿಕೆ ನೀಡಿದರು.