ಹುಬ್ಬಳ್ಳಿ:ಉತ್ತರ ಕರ್ನಾಟಕ ಭಾಗದ ವಾಣಿಜ್ಯ ಬೆಳೆ ಹತ್ತಿ. ಆದ್ರೆ ಅಧಿಕಾರಿಗಳ ನಿರ್ಲಕ್ಷದಿಂದ ರೈತ ಇಂದು ಹತ್ತಿ ಮಾರಾಟ ಮಾಡಲು ಸುಮಾರು ನೂರಾರು ಕಿಲೋಮೀಟರ್ ದೂರ ಕ್ರಮಿಸಬೇಕಿದೆ. ರೈತರಿಗೆ ಸಮೀಪದಲ್ಲಿರುವ ಪ್ರದೇಶದಲ್ಲಿ ಹತ್ತಿ ಖರೀದಿ ಕೇಂದ್ರವನ್ನು ಸ್ಥಾಪಿಸಲು ಸೂಚನೆ ನೀಡಿದ್ದಾದರೂ, ಅಧಿಕಾರಿಗಳು ಮಾತ್ರ ರೈತನ ಹಿತವನ್ನು ಕಾಪಾಡದೇ ತಮಗೆ ತೋಚಿದ ರೀತಿಯಲ್ಲಿ ಹತ್ತಿ ಖರೀದಿ ಕೇಂದ್ರ ಸ್ಥಾಪನೆ ಮಾಡುತ್ತಿದೆ.
ಉತ್ತರ ಕರ್ನಾಟಕ ಭಾಗದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಸುಮಾರು 18-20 ಸಾವಿರ ಹೆಕ್ಟೇರ್ ಹತ್ತಿಯನ್ನು ಬೆಳೆಯಲಾಗಿದೆ. ಆದರೆ ಬೆಳೆದ ಹತ್ತಿಯನ್ನು ಮಾರಾಟ ಮಾಡಲು ಸುಮಾರು 100 ಕಿಲೋಮೀಟರ್ ದೂರ ಹೋಗಬೇಕಾಗಿದ್ದು, ರೈತನಿಗೆ ಆರ್ಥಿಕ ಸಂಕಷ್ಟದೊಂದಿಗೆ ಸಾರಿಗೆ ಸಮಸ್ಯೆ ಕೂಡ ಎದುರಾಗಿದೆ.
ಹತ್ತಿ ಮಾರಾಟ ಮಾಡಲು ಬೆಳೆಗಾರರ ಪರದಾಟ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಎರಡು ಜಿಲ್ಲೆಯ ಗಡಿಭಾಗದಲ್ಲಿರುವ ಗೂಗಲ್ ಗ್ರಾಮದಲ್ಲಿ ವಿಶ್ವಗಂಗಾ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿ ಖರೀದಿ ಕೇಂದ್ರವನ್ನು ಸ್ಥಾಪನೆ ಮಾಡಬೇಕು. ಈಗಾಗಲೇ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ರೈತರು ಹತ್ತಿ ಖರೀದಿ ಕೇಂದ್ರ ಸ್ಥಾಪಿಸುವಂತೆ ಮನವಿ ಮಾಡಿದ್ದರೂ ಸಹ ಅಧಿಕಾರಿಗಳು ಭರವಸೆ ನೀಡಿ ಸುಮ್ಮನಾಗುತ್ತಿದ್ದಾರೆ ಎಂಬುವುದು ಅನ್ನದಾತನ ಅಳಲಾಗಿದೆ.
ಒಟ್ಟಿನಲ್ಲಿ ಸರ್ಕಾರದ ಭರವಸೆ ನೆಚ್ಚಿಕೊಂಡು ಜೀವನ ನಡೆಸುತ್ತಿರುವ ರೈತ ಸಮುದಾಯಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಯಾಗುತ್ತಿದೆ. ಕೂಡಲೇ ಉತ್ತರ ಕರ್ನಾಟಕ ಭಾಗದಲ್ಲಿ ರೈತರಿಗೆ ಅವಶ್ಯಕತೆ ಇರುವ ಸ್ಥಳದಲ್ಲಿ ಹತ್ತಿ ಖರೀದಿ ಕೇಂದ್ರವನ್ನು ಸ್ಥಾಪಿಸಿ ಅನ್ನದಾತನ ಕಷ್ಟವನ್ನು ದೂರ ಮಾಡಬೇಕು ಎಂಬುವುದು ರೈತ ಸಮುದಾಯದ ಆಗ್ರಹವಾಗಿದೆ.