ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಕಿಮ್ಸ್ ಸಿಬ್ಬಂದಿ ಯಡವಟ್ಟು : ಜನಿಸಿದ್ದು ಗಂಡು, ತಾಯಿ ಕೈಗೆ ಕೊಟ್ಟಿದ್ದು ಹೆಣ್ಣು ಶಿಶು.. ಮುಂದೆ ಆಗಿದ್ದೇನು? - ಕಿಮ್ಸ್ ಅಧೀಕ್ಷಕ ಅರುಣ್​ ಕುಮಾರ್

ಕಿಮ್ಸ್​ ಆಸ್ಪತ್ರೆಯ ಸಿಬ್ಬಂದಿ ಗಂಡು ಮಗುವಿನ ಬದಲಿಗೆ ಹೆಣ್ಣು ಮಗುವನ್ನು ಬದಲಿಸಿ ಕೊಟ್ಟಿದ್ದಾರೆ. ಹೀಗಾಗಿ ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಗುವಿನ ಪೋಷಕರು
ಮಗುವಿನ ಪೋಷಕರು

By ETV Bharat Karnataka Team

Published : Sep 20, 2023, 9:53 PM IST

ಮಗುವಿನ ತಂದೆ ಶಿವಪ್ಪ ಪೂಜಾರ ಮಾತನಾಡಿದ್ದಾರೆ

ಹುಬ್ಬಳ್ಳಿ :ಗಂಡು ಮಗು ಹುಟ್ಟಿದರೆ ಹೆತ್ತವರಿಗೆ ಎಲ್ಲಿಲ್ಲದ ಸಂತೋಷ. ಆದರೆ ಗಂಡು ಹುಟ್ಟಿದ್ದ ಖುಷಿಯಲ್ಲಿದ್ದ ಹೆತ್ತವರಿಗೆ ಆಸ್ಪತ್ರೆಯ ವೈದ್ಯರ ಎಡವಟ್ಟು ಸಂಕಷ್ಟವನ್ನೇ ತಂದೊಡ್ಡಿದ ಘಟನೆ ಕಿಮ್ಸ್​ ಆಸ್ಪತ್ರೆಯಲ್ಲಿ ನಡೆದಿದೆ.

ಗದಗ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುತ್ತವ್ವ ಎಂಬ ಮಹಿಳೆ ಸೆ. 3 ನೇ ತಾರೀಖು ಗಂಡು ಮಗುವಿಗೆ ಜನ್ಮ ನೀಡಿದ್ದರು. ಕಳೆದ 15 ದಿನಗಳ ಹಿಂದೆ ಮುತ್ತವ್ವಗೆ ಜನಿಸಿದ್ದ ಗಂಡು‌ಮಗುವನ್ನು ಚಿಕಿತ್ಸೆಗಾಗಿ ಐಸಿಯುನಲ್ಲಿ ಇಟ್ಟಿದ್ದಾರೆ. ಜನನ ದಾಖಲೆಯಲ್ಲಿ ಗಂಡು ಮಗು ಅಂತ ದಾಖಲಿಸಿದ್ದರೂ ಕೂಡ ಹೆಣ್ಣು ಮಗವನ್ನು ಕೊಟ್ಟು ಕಿಮ್ಸ್ ವೈದ್ಯರು ಎಡವಟ್ಟು ಮಾಡಿದ್ದಾರೆ. ಶಿವಪ್ಪ ಮುತ್ತವ್ವ ಪೂಜಾರ್ ಎಂಬ ದಂಪತಿಗೆ ಗಂಡು‌ ಮಗು ಜನಿಸಿದೆ. ಆದರೆ, 15 ದಿನಗಳ ಬಳಿಕ ತಾಯಿಗೆ ಹೆಣ್ಣು ಮಗು ನೀಡಿದ್ದಾರೆ. ಕಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಗಂಡು ಮಗುವಿನ ಬದಲಿಗೆ ಹೆಣ್ಣು ಮಗು ನೀಡಿದ ವೈದ್ಯರ ವಿರುದ್ಧ ಮಗುವಿನ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯ ಪುಂಡಲಿಕ ಛಲವಾದಿ

''ನಾವು ಡೆಲಿವರಿಗೆ ಬಂದು 18 ದಿವಸ ಆಯ್ತು. ಮಗು ತೂಕ ಕಡಿಮೆ ಇದೆ ಎಂದು ಐಸಿಯುನಲ್ಲಿಟ್ಟಿದ್ದರು. ತಾಯಿಗೆ ಸಿಜರಿನ್​ ಆಗಿದ್ದರಿಂದ ಅವರನ್ನು ಐಸಿಯುನಲ್ಲಿಟ್ಟಿದ್ದರು. ನಾವು ಪ್ರತಿದಿನ ಹೋಗಿ ವೈದ್ಯರನ್ನು ಕೇಳಿದಾಗ, ಅವರು ಮಗು ಆರಾಮಾಗಿದೆ ಎನ್ನುತ್ತಿದ್ದರು. ಇವತ್ತು ಹೋಗಿ ಕೇಳಿದ್ರೆ, ಇಲ್ಲ ನಿಮ್ಮ ಮಗು ಗಂಡು ಅಲ್ಲ, ಹೆಣ್ಣು ಎಂದು ಹೇಳಿದ್ರು. ಇಲ್ಲ ನಮ್ಮ ಮಗು ಗಂಡು, ನಾವು ಅವತ್ತು ನೋಡಿದ್ದೆವು, ಸಹಿ ಮಾಡಿದ್ದೇವೆ ಎಂದೆ. ಅದಕ್ಕವರು ಇಲ್ಲ ನಿಮ್ಮದು ಹೆಣ್ಣು ಮಗು ಎಂದರು.

ನಾನು ಮತ್ತೆ ಇಲ್ಲ ಅಂದಿದ್ದಕ್ಕೆ, ಅವರು ಇಲ್ಲ ನಿಮ್ಮದು ಹೆಣ್ಣು ಮಗು ಬೇಕಾದ್ರೆ ತೆಗೆದುಕೊಳ್ಳಿ, ಬೇಡ ಅಂದ್ರೆ ಬಿಡಿ ಎಂದರು. ಆಸ್ಪತ್ರೆ ಒಳಗಿರುವ ನರ್ಸ್​ಗಳೇ ಬದಲಿ ಮಾಡಿದ್ದಾರೆ. ಡೆಲಿವರಿಯಾದಾಗ ವೈದ್ಯರೇ ನಮಗೆ ಗಂಡು ಎಂದು ಹೇಳಿದ್ದರು. ಅದರ ಬಗ್ಗೆ ಜನನ ಪತ್ರದಲ್ಲಿ ಬರೆದುಕೊಟ್ಟಿದ್ದರು. ಈಗ ಆಸ್ಪತ್ರೆಯಲ್ಲಿರುವ ನರ್ಸ್​ ನಿಮಗೆ ಹೆಣ್ಣು ಮಗು ಎಂದಿದ್ದಾರೆ. ನಮಗೆ ಜನಿಸಿರುವುದು ಗಂಡು ಮಗು. ಆದರೆ, ಅವರು ಹೆಣ್ಣು ಮಗು ಎನ್ನುತ್ತಿದ್ದಾರೆ. ಮುಂದೆ ಈ ರೀತಿ ಯಾರಿಗೂ ಆಗಬಾರದು ಎಂಬುದು ನಮ್ಮ ಒತ್ತಾಯ'' ಅಂತಾರೆ ಮಗುವಿನ ತಂದೆ ಶಿವಪ್ಪ ಪೂಜಾರ. ಕಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದ್ದು, ಕಿಮ್ಸ್ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಬ್ಯಾಂಡ್‌ ಬದಲಾವಣೆಯೇ ಮಗು ಬದಲಾವಣೆಗೆ ಕಾರಣ: ತಾಯಿ ಮತ್ತು ಮಗುವಿಗೆ ಕೈಗೆ ಒಂದೇ ನಂಬರಿನ ಬ್ಯಾಂಡ್ ಕಟ್ಟಿರುತ್ತಾರೆ. ಬ್ಯಾಂಡ್ ಕಳಚಿ ಬಿದ್ದಿರುವ ಕಾರಣ ಕನ್​ಪ್ಯೂಷನ್ ಆಗಿ ಮಗು ಅದಲು ಬದಲಾಗಿದೆ ಎಂದು ಕಿಮ್ಸ್ ಅಧೀಕ್ಷಕ ಅರುಣ್​ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಹದಿನೈದು ದಿನಗಳ ಕಾಲ ಮಗು ಐಸಿಯುನಲ್ಲಿ ಇತ್ತು.‌ ಅರ್ಧಗಂಟೆ ಕಾಲ ಬ್ಯಾಂಡ್ ಗೊಂದಲದಿಂದ ಬೇರೆ ಮಗುವನ್ನು ಕೊಡಲಾಗಿತ್ತು. ಈ ನಿಟ್ಟಿನಲ್ಲಿ ಭೇಟಿ ನೀಡಿ ಗೊಂದಲ ನಿವಾರಣೆ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ದೇಹದೊಳಗಿನ ಅಂಗಾಂಗಗಳು ಉಲ್ಟಾಪಲ್ಟಾ, ಹೃದಯವೂ ಬಲಭಾಗದಲ್ಲಿ! ಕಿಮ್ಸ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ABOUT THE AUTHOR

...view details