ಕರ್ನಾಟಕ

karnataka

ETV Bharat / state

ಬೇಡಿದವರಿಗೆ ಇಷ್ಟಾರ್ಥ ಕರುಣಿಸುವ ಮಹಿಮಾನ್ವಿತ ದೈವ: ನವಲಗುಂದ ರಾಮಲಿಂಗ ಕಾಮದೇವರು - ರಾಮಲಿಂಗ ಕಾಮಣ್ಣನ ದಹನ

ನವಲಗುಂದ ಪಟ್ಟಣದ ಶ್ರೀ ರಾಮಲಿಂಗ ಕಾಮಣ್ಣ ದೇವರು ಬೇಡಿದ ಭಕ್ತರಿಗೆ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಸಂತಾನಹೀನರಿಗೆ ಸಂತಾನಭಾಗ್ಯ, ಅನಾರೋಗ್ಯ ಪೀಡಿತರಿಗೆ ಆರೋಗ್ಯವನ್ನು ನೀಡುತ್ತಾ ಬಂದಿದ್ದಾರೆ.

ಶ್ರೀ ರಾಮಲಿಂಗ ಕಾಮಣ್ಣ ದೇವರು
ಶ್ರೀ ರಾಮಲಿಂಗ ಕಾಮಣ್ಣ ದೇವರು

By

Published : Mar 6, 2023, 8:48 PM IST

Updated : Mar 7, 2023, 8:16 AM IST

ನವಲಗುಂದ ರಾಮಲಿಂಗ ಕಾಮದೇವರ ದರ್ಶನ ಪಡೆದ ಭಕ್ತರು ಮಾತನಾಡಿದರು

ಹುಬ್ಬಳ್ಳಿ :ನವಲಗುಂದ ಕಾಮದೇವರು ಇಷ್ಟಾರ್ಥ ಸಿದ್ದಿ ದೈವವಾಗಿದ್ದಾರೆ. ಬೇಡಿದವರ ಇಷ್ಟಾರ್ಥಗಳನ್ನು ಕರುಣಿಸುವ ಕಾಮದೇವರು ದೈವ ಎಂದು ಖ್ಯಾತಿ ಪಡೆದಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ಆಚರಿಸುವ ಹೋಳಿ ಆಚರಣೆ ಹಾಗೂ ನವಲಗುಂದ ರಾಮಲಿಂಗ ಕಾಮದೇವರಿಗೂ ಸಾಕಷ್ಟು ವ್ಯತ್ಯಾಸ ಹಾಗೂ ಮಹತ್ವವಿದೆ. ಇಲ್ಲಿ ವಿಶಿಷ್ಟವಾಗಿ ಕಾಮದೇವರನ್ನು ಪೂಜಿಸಲಾಗುತ್ತದೆ.

ಕೇವಲ ಬಣ್ಣ, ಓಕುಳಿ, ಹಲಗೆ ವಾದನಕ್ಕಷ್ಟೆ ಸೀಮಿತಗೊಳ್ಳದೇ ಭಯ ಭಕ್ತಿಗೆ ಒಲಿವ, ಬೇಡಿದ್ದನ್ನು ದಯಪಾಲಿಸುವ ಮಹಿಮಾನ್ವಿತ ದೈವ, ಸಂತಾನಹೀನರಿಗೆ ಸಂತಾನಭಾಗ್ಯ, ಅನಾರೋಗ್ಯಪೀಡಿತರಿಗೆ ಆರೋಗ್ಯ ನೀಡುತ್ತಾನೆ. ಭಕ್ತಿಯಿಂದ ಭಜಿಸುವವರಿಗೆ ಈತ ಅಕ್ಷರಶಃ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ. ನವಲಗುಂದ ಪಟ್ಟಣದ ಶ್ರೀ ರಾಮಲಿಂಗ ಕಾಮಣ್ಣನು ರಾಜ್ಯ ಹೊರರಾಜ್ಯದಿಂದ ಭಕ್ತರನ್ನು ಗಳಿಸಿರುವ ಇಷ್ಟಾರ್ಥ ಪುರುಷನಾಗಿ ಪೂಜೆಗೊಳ್ಳುತ್ತಿರುವ ಕಾಮದೇವನಾಗಿದ್ದಾರೆ. ಹೋಳಿ ಹುಣ್ಣಿಮೆ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ‌. ಏಕಾದಶಿ ರಾತ್ರಿಯಿಂದ ಕಾಮಣ್ಣನ ಪ್ರತಿಷ್ಠಾಪನೆಯಾಗಿದ್ದು, ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಭಯ, ಭಕ್ತಿ, ಶ್ರದ್ಧೆಯಿಂದ ಇಲ್ಲಿಗೆ ಆಗಮಿಸುತ್ತಾರೆ.

ಹಿಂದು-ಮುಸ್ಲಿಂ ಬಾಂಧವರು ಸೇರಿಕೊಂಡು ಹಿಂದೂ ಪದ್ಧತಿಯಂತೆ ಹಗಲಿರುಳೆನ್ನದೆ ಶ್ರಮವಹಿಸಿ ಪ್ರತಿಷ್ಟಾಪನೆಯಿಂದ ಹಿಡಿದು ಕಾಮ ದಹನದವರೆಗೂ ಸೇವೆ ಸಲ್ಲಿಸುತ್ತಾರೆ. ಪ್ರತಿಯೊಂದು ಓಣಿಯಲ್ಲಿ ಪ್ರತಿಷ್ಠಾಪಿಸಲಾದ ಕಾಮಣ್ಣಗಳಲ್ಲಿ ಇಷ್ಟಾರ್ಥ ಪೂರೈಸಿಕೊಳ್ಳಲು ಮಹಿಳೆಯರು ಉಪವಾಸ ವ್ರತ ಮಾಡಿ ಭಕ್ತಿಯಿಂದ ಪೂಜಿಸಿ ಹರಕೆ ತೀರಿಸುತ್ತಾರೆ.

ರಾಮಲಿಂಗ ಕಾಮಣ್ಣನ ಐತಿಹಾಸಿಕ ಹಿನ್ನೆಲೆ: ಸವಣೂರು ನವಾಬರ ಆಡಳಿತಾವಧಿಯಲ್ಲಿ ಸಿದ್ಧಿ ಪುರುಷನೊಬ್ಬ ವಿಶೇಷ ನಕ್ಷತ್ರ ದಿನದಂದು ವಿವಿಧ ಬಗೆಯ ಗಿಡಮೂಲಿಕೆ ಗಿಡಗಳನ್ನು ಆಯ್ದು ತಂದು ಕಾಮಕಾಷ್ಠ ಮೂರ್ತಿ ರಚಿಸಲು ಸಿದ್ದನಾದನಂತೆ.‌ ಇದೇ ವೇಳೆ, 99 ಗಿಡಮೂಲಿಕೆ ಕಟ್ಟೆಗೆಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಂಕಲ್ಪಕ್ಕೆ ಮುಂದಾದ. ಆದರೆ ಇನ್ನೊಂದು ಗಿಡಮೂಲಿಕೆ ಕಟ್ಟಿಗೆ ಸಿಕ್ಕಿದ್ದರೆ ಆತನ ಲೌಕಿಕ ಸಂಕಲ್ಪದ ಮೂರ್ತಿಗೆ ಜೀವಕಳೆ ಬರುತ್ತಿತ್ತು ಎಂಬ ಪ್ರತೀತಿ ಇದೆ.

ಅಷ್ಟರಲ್ಲಿ ದೈವ ಪುರುಷ ದೈವಾದೀನನಾದರೆಂದು ಹೇಳುತ್ತಾರೆ. ಇನ್ನೊಂದು ಮೂಲಿಕೆ ಜೋಡಣೆಗಾಗಿ ಆತ ಕೊರೆದ ರಂಧ್ರ ಇಂದಿಗೂ ಕಾಣಬಹುದಾಗಿದೆ. ನೂರಾರು ವರ್ಷದ ಹಿಂದೆಯೇ ಸಿದ್ದಿ ಪುರುಷನ ಹಸ್ತದಿಂದ ತಯಾರಿಸಿದ ಮೂರ್ತಿಯನ್ನು ನವಲಗುಂದ ಪಟ್ಟಣಕ್ಕೆ ಯಾರು ಬರಮಾಡಿಕೊಂಡರೆಂಬುದು ಇಂದಿಗೂ ನಿಗೂಢಾಸ್ಪದವಾಗಿ ಉಳಿದಿದೆ.

ಇಷ್ಟಾರ್ಥ ಪೂರೈಸುವ ಆದಿದೇವ:ರಾಮಲಿಂಗೇಶ್ವರ ಕಾಮದೇವರು ಬೇಡಿದವರಿಗೆ ಬೇಡಿದ್ದನ್ನು ಕರುಣಿಸುವ ಕರುಣಾಳು ಆಗಿದ್ದಾನೆ. ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಲು ರಾಮಲಿಂಗತೊಟ್ಟಿಲು, ಕಂಕಣ ಬಾಗ್ಯಕ್ಕಾಗಿ ಬೆಳ್ಳಿಯ ಬಾಸಿಂಗ, ಅನಾರೋಗ್ಯ ನಿವಾರಣೆಗೆ ಬೆಳ್ಳಿ ಕುದುರೆ, ಮನೆ ವಸತಿ ಇಲ್ಲದವರು ಛತ್ರಿ ಛಾಮರ, ಉದ್ಯೋಗ ಬದುಕಿಗೆ ನೆಲೆ ಕಂಡುಕೊಳ್ಳಬೇಕಾದರೆ ಬೆಳ್ಳಿ ಪಾದ ಅಥವಾ ಕುದುರೆ ಹರಕೆ ಹೊತ್ತು ಪೂಜಿಸಿದರೆ ಅವರ ಬೇಡಿಕೆ ಖಂಡಿತಾ ಈಡೇರುತ್ತದೆ ಎಂಬ ಪ್ರತೀತಿ ಇದೆ.

ಇಷ್ಠಾರ್ಥ ಸಿದ್ದಿ ಕಲ್ಪಿಸಿದ ನಂತರ ಇನ್ನೊಂದು ಬೆಳ್ಳಿ ಸಾಮಗ್ರಿ ಕಾಮಣ್ಣನಿಗೆ ಸಮರ್ಪಿಸಬೇಕು. ಹರಕೆ ತೀರಿಸುವ ಭಕ್ತರಿಗೆ ಸಂಘಟಕರೇ ಶುಲ್ಕ ವಿಧಿಸಿ ಪೂಜೆ ಪೂರೈಸುತ್ತಾರೆ. ರಾಜ್ಯ ಹೊರರಾಜ್ಯದಿಂದ ಆಗಮಿಸಿದ ಭಕ್ತರು ರಾಮಲಿಂಗೇಶ್ವರ ದೇವಸ್ಥಾನದಿಂದ ಸುಮಾರು ಎರಡು ಕೀ. ಮೀ ದೂರದವರೆಗೆ ಸರತಿ ಸಾಲಿನಲ್ಲಿ ನಿಂತು ಸುಡುಬಿಸಿಲಿನಲ್ಲಿಯೇ ಭಕ್ತರು ದರ್ಶನ ಪಡೆಯುತ್ತಾರೆ.

ಹುಣ್ಣಿಮೆ ಮರುದಿನ ರಾಮಲಿಂಗ ಕಾಮಣ್ಣನ ಮೆರವಣಿಗೆ ನಡೆಸಿ ಬೆಳಿಗ್ಗೆ ಕಾಮದಹನ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ರಾಮಲಿಂಗ ಕಾಮಣ್ಣನ ಮೂಲ ಮೂರ್ತಿ ತೆಗೆದು ಅದರ ಬದಲಾಗಿ ಗಡಿಗೆ ಹಾಕಿ ಅಗ್ನಿಸ್ಪರ್ಶ ಮಾಡಲಾಗುತ್ತದೆ. ದಹನಗೊಳ್ಳುತ್ತಿರುವ ಕಾಮಣ್ಣನ ಗಡಿಗೆ ಮುಂದೆ ಬಿದ್ದರೆ ಮುಂಗಾರು ಉತ್ತಮ ಫಸಲು, ಹಿಂದೆ ವಾಲಿದರೆ ಹಿಂಗಾರು ಫಸಲು ಉತ್ತಮವಾಗಿ ಬರುತ್ತದೆಂಬ ವಾಡಿಕೆ ಇದೆ.

ಅರ್ಚಕರೇ ಇಲ್ಲದ ದೈವ : ಈ ಕಾಮದೇವರಿಗೆ ಪೂಜಾರಿಗಳೇ ಇಲ್ಲ, ಪ್ರತಿಯೊಂದು ದೇವಸ್ಥಾನದಲ್ಲಿ ಒಬ್ಬ ಪೂಜಾರಿ ಅಥವಾ ಪುರೋಹಿತನಿರುತ್ತಾನೆ. ಆದರೆ, ರಾಮಲಿಂಗ ದೇವಸ್ಥಾನದಲ್ಲಿರುವ ಕಾಮಣ್ಣನಿಗೆ ಯಾವುದೇ ಪೂಜಾರಿ ಇಲ್ಲದಿರುವುದು ವಿಶೇಷ. ಹೋಳಿ ಹುಣ್ಣಿಮೆ ಪೂಜಾ ವಿಧಿ-ವಿಧಾನದಲ್ಲಿಯೋ ಕೂಡ ಮಂತ್ರ ಘೋಷಣೆ, ಅರ್ಚನೆಯೂ ಇಲ್ಲ. ಭಕ್ತರೇ ಪೂಜೆ ಸಲ್ಲಿಸಿ ಹರಕೆ ಹೊರುವ ಸಂಪ್ರದಾಯ ಇಲ್ಲಿದೆ.

ಮಾರ್ಚ್​ 8 ಬುಧವಾರ ಕಾಮದಹನ: ದಿನಾಂಕ 03-03-2023 ನೇ ಶುಕ್ರವಾರ ಏಕಾದಶಿ ರಾತ್ರಿಯಂದು ರಾಮಲಿಂಗ ಕಾಮಣ್ಣನ ಪ್ರತಿಸ್ಥಾಪನೆಯಾಗಿದೆ. ಶನಿವಾರ ದಿ. 04-3-2023 ರ ಬೆಳಿಗ್ಗೆ ಭಕ್ತರ ದರ್ಶನ ಪ್ರಾರಂಭ. ಮಾ-07 ಹೋಳಿ ಹುಣ್ಣಿಮೆ, ಮಾ-08 ನೇ ಬುಧವಾರ ದಿವಸ ಬಣ್ಣದಾಟ (ಓಕುಳಿ) ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಮಲಿಂಗ ಕಾಮಣ್ಣ ಹಾಗೂ ವಿವಿಧ 14 ಕಡೆಗಳಲ್ಲಿ ಪ್ರತಿಷ್ಠಾಪಿಸಿದ ಇತಿಹಾಸ ವೈಶಿಷ್ಟಿ ಪೂರ್ಣ ಕಾಮಣ್ಣಗಳ ನಡೆದುಬಂದಂತೆಯೇ ವಿಜೃಂಭಣೆಯಿಂದ ರಗ್ಗ ಹಲಗಿ, ವಾದ್ಯಮೇಳದೊಂದಿಗೆ ಮೆರವಣೆಗೆ ನಡೆಯಲಿದೆ. ಉಳಿದ ಕಾಮಣ್ಣಗಳ ಅಗ್ನಿಸ್ಪರ್ಶದ ನಂತರ ಇಷ್ಟಾರ್ಥ ಸಿದ್ದಿ ರಾಮಲಿಂಗ ಕಾಮಣ್ಣನ ದಹನವಾಗುತ್ತದೆ.

ಇದನ್ನೂ ಓದಿ :ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವಿಶೇಷ

Last Updated : Mar 7, 2023, 8:16 AM IST

ABOUT THE AUTHOR

...view details