ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಯುವ ಜನೋತ್ಸವ ಲಾಂಛನ ಬಿಡುಗಡೆ: ವರ್ಚುವಲ್ ಮೂಲಕ ಸಿಎಂ, ಕೇಂದ್ರ ಸಚಿವರು ಭಾಗಿ - national yuva janotsav

ರಾಷ್ಟ್ರೀಯ ಯುವ ಜನೋತ್ಸವ ಲಾಂಛನ ಬಿಡುಗಡೆ - ಹುಬ್ಬಳ್ಳಿ, ಧಾರವಾಡದಲ್ಲಿ ಜನವರಿ 12 ರಂದು 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಆಯೋಜನೆ - ವರ್ಚುವಲ್ ಮೂಲಕ ಲಾಂಛನ ಬಿಡುಗಡೆ ಮಾಡಿದ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್, ಸಿಎಂ ಬೊಮ್ಮಾಯಿ

ರಾಷ್ಟ್ರೀಯ ಯುವ ಜನೋತ್ಸವ ಲಾಂಛನ ಬಿಡುಗಡೆ
ರಾಷ್ಟ್ರೀಯ ಯುವ ಜನೋತ್ಸವ ಲಾಂಛನ ಬಿಡುಗಡೆ

By

Published : Jan 7, 2023, 1:50 PM IST

ರಾಷ್ಟ್ರೀಯ ಯುವ ಜನೋತ್ಸವ ಲಾಂಛನ ಬಿಡುಗಡೆ ಕಾರ್ಯಕ್ರಮ

ಹುಬ್ಬಳ್ಳಿ: ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಜನವರಿ 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಯೋಜಿಸಲಾಗಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಲಾಂಛನವನ್ನು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಉಪಸ್ಥಿತಿಯಲ್ಲಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ವರ್ಚುವಲ್ ಮೂಲಕ ಲಾಂಛನ ಬಿಡುಗಡೆ ಮಾಡಿದರು.

ಹುಬ್ಬಳ್ಳಿಯ ಬಿವಿಬಿ ಬಯೋಟೆಕ್ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಲಾಂಛನ ಬಿಡುಗಡೆ ಮಾಡಲಾಯಿತು. ದೆಹಲಿ ಹಾಗೂ ಬೆಂಗಳೂರಿನಿಂದ ವರ್ಚುವಲ್ ಮೂಲಕ ಲಾಂಛನ ಬಿಡುಗಡೆಗೊಳಿಸಿದ ಸಚಿವರು ಹಾಗೂ ಸಿಎಂ, ಯುವ ಜನೋತ್ಸವದ ಆರಂಭಕ್ಕೆ ಸೂಕ್ತ ಅಡಿಪಾಯ ಹಾಕಿದರು. ಲಾಂಛನ‌ ಬಿಡುಗಡೆ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್, ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಕ್ರೀಡಾಕೂಟ ಆಯೋಜನೆ ಹಾಗೂ ಇದೀಗ ಈ ವರ್ಷ ಯುವಜನ ಉತ್ಸವ ಆಯೋಜನೆಗೆ ಅವಕಾಶ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಯವರು ಕೃತಜ್ಞತೆ ಸಲ್ಲಿಸಿದರು. ಯುವಜನ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಸಿಎಂ ತಿಳಿಸಿದರು.

ಯುವ ಜನಪ್ರತಿನಿಧಿಗಳ ಗೋಷ್ಠಿ: ಈ ಸಂದರ್ಭದಲ್ಲಿ ಯುವಜನ ಉತ್ಸವ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು. ಯುವಜನ ಮೇಳದಲ್ಲಿ ಯುವ ಶಾಸಕರು, ಸಂಸದರು ಹಾಗೂ ಇತರ ಜನಪ್ರತಿನಿಧಿಗಳ ಗೋಷ್ಠಿಯನ್ನು ಆಯೋಜಿಸಲು ತೀರ್ಮಾನಿಸಲಾಯಿತು. ವಿವಿಧ ರಾಜ್ಯಗಳಿಂದ ಆಗಮಿಸುವ ಯುವಜನರಿಗೆ ರೈಲ್ವೆ ವಿಶೇಷ ಬೋಗಿ ಅಳವಡಿಸುವ ಕುರಿತು ರೈಲ್ವೆ ಮಂಡಳಿಯು ಒಪ್ಪಿಗೆ ನೀಡಿತು.

ಜನರ ಭಾಗೀದಾರಿಕೆಗೆ ಕೇಂದ್ರ ಸಚಿವರ ಮೆಚ್ಚುಗೆ:ಉತ್ಸವದ ಲೋಗೋ ಮತ್ತು ಮ್ಯಾಸ್ಕಟ್ ವಿನ್ಯಾಸವನ್ನು ಸ್ಪರ್ಧೆ ಆಯೋಜಿಸುವ ಮೂಲಕ ರೂಪಿಸಿದ ಕುರಿತು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದರು. ಒಡಿಶಾದ ಬನ್ಸಿಲಾಲ್ ಕೇತ್ಕಿ ರೂಪಿಸಿದ ಲೋಗೋವನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ 50 ಸಾವಿರ ರೂ. ಬಹುಮಾನ ದೊರೆಯಲಿದೆ. ಈ ಲೋಗೋ ಭಾರತದ ರಾಷ್ಟ್ರೀಯ ಪುಷ್ಪ ತಾವರೆಯಿಂದ ಪ್ರೇರೇಪಿತವಾಗಿದ್ದು, ರಾಷ್ಟ್ರೀಯತೆ, ನಿಸ್ವಾರ್ಥ ಸೇವೆ ಮತ್ತು ವೈವಿಧ್ಯತೆಯ ನಡುವೆಯೂ ಇರುವ ಏಕತೆ ಹಾಗೂ ಸಹಕಾರವನ್ನು ಪ್ರತಿನಿಧಿಸುತ್ತದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ, ವಿದೇಶಾಂಗ ವ್ಯವಹಾರದಲ್ಲಿ ಹಾಗೂ ಸೇನಾಬಲದಲ್ಲಿ ಭಾರತದ ಉನ್ನತಿಯನ್ನು ಬಿಂಬಿಸುವ ಜೊತೆಗೆ, ಜಿ20 ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಸಹ ಅಭಿವ್ಯಕ್ತಪಡಿಸುತ್ತದೆ.

'ಚಂಪಿ ಚಿಕ್ಕ' ಮ್ಯಾಸ್ಕಟ್ ಆಯ್ಕೆ: ಅಂತೆಯೇ ಬೆಂಗಳೂರಿನ ಇನ್ಬಂ ಅವರು ರೂಪಿಸಿದ ಚಂಪಿ ಚಿಕ್ಕ ಮ್ಯಾಸ್ಕಟ್ ಆಯ್ಕೆಯಾಗಿದ್ದು, ಅವರಿಗೂ 50 ಸಾವಿರ ರೂ. ಬಹುಮಾನ ದೊರೆಯಲಿದೆ. ಇದು ಆನೆಯ ವಿನ್ಯಾಸವನ್ನು ಹೊಂದಿದ್ದು, ಕರ್ನಾಟದಲ್ಲಿ ಅತಿ ಹೆಚ್ಚಿರುವ ಆನೆಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಗುರಿ, ವಿಶ್ವ ಶಾಂತಿಯ ಜೊತೆಗೆ ಕ್ರೀಡೆ, ಸ್ಟಾರ್ಟಪ್, ನಾವಿನ್ಯತೆ, ಶಿಕ್ಷಣ ಸೇರಿಂದ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಯುವ ಮತ್ತು ಆಧುನಿಕ ಭಾರತವನ್ನು ಬಿಂಬಿಸುತ್ತದೆ.

ಪ್ರಧಾನಿ ಮೋದಿ ಉತ್ಸವಕ್ಕೆ ಚಾಲನೆ: 'ವಿಕಸಿತ್ ಯುವ-ವಿಕಸಿತ್ ಭಾರತ್' ಎಂಬ ವಿಷಯದಡಿ ನಡೆಯುತ್ತಿರುವ ಈ ಯುವಜನ ಉತ್ಸವದಲ್ಲಿ ದೇಶದ ಎಲ್ಲೆಡೆಯಿಂದ ಸುಮಾರು 7,500 ಜನರು ಭಾಗವಹಿಸುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರ ಜನ್ಮದಿನದಂದು ಜನವರಿ 12ರಂದು ಹುಬ್ಬಳ್ಳಿಯಲ್ಲಿ ಈ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ರಾಷ್ಟ್ರೀಯ ಯುವಜನೋತ್ಸವದ ಹಿನ್ನೆಲೆ: ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ಬಾರಿ ರಾಷ್ಟ್ರೀಯ ಯುವಜನೋತ್ಸವದ ಆತಿಥ್ಯವನ್ನು ಕರ್ನಾಟಕ ವಹಿಸಿಕೊಂಡಿದ್ದು, ಹುಬ್ಬಳ್ಳಿ ಧಾರವಾಡದಲ್ಲಿ ಜನವರಿ 12 ರಿಂದ 16 ರವರೆಗೆ ನಡೆಯಲಿದೆ. ಕಾರ್ಯಕ್ರಮ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಹುಬ್ಬಳ್ಳಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 7 ಸಾವಿರಕ್ಕೂ ಹೆಚ್ಚು ಪತ್ರಿನಿಧಿಗಳು ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಯುವಜನೋತ್ಸವ ಕಾರ್ಯಕ್ರಮದ ಉದ್ದೇಶ: ಯುವ ಜನೋತ್ಸವ ಕಾರ್ಯಕ್ರಮವು ದೇಶದ ಯುವಜನಾಂಗವನ್ನು ಪ್ರೇರೇಪಿಸುವುದು ಮತ್ತು ರಾಷ್ಟ್ರ ನಿರ್ಮಾಣದ ಕಡೆಗೆ ಯುವಕರನ್ನು ಏಕೀಕರಿಸವುದು ಮುಖ್ಯ ಉದ್ದೇಶವಾಗಿದೆ. ಕಳೆದ ವರ್ಷ ನಡೆದ 25ನೇ ರಾಷ್ಟ್ರಿಯ ಯುವಜನೋತ್ಸವ ಕಾರ್ಯಕ್ರಮವು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ನಡೆದಿತ್ತು.

ಪೊಲೀಸ್ ಭದ್ರತೆ: ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಕೈಗೊಳ್ಳುತ್ತಿದೆ.

ಇದನ್ನೂ ಓದಿ:ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವ: ಕರ್ನಾಟಕ ವಿವಿಗೆ ರಜೆ ಘೋಷಣೆ

ಆಹಾರ ಮೇಳ: ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಆಹಾರ ಮೇಳ ಸಹ ನಡೆಯಲಿದೆ. ದೇಶದ ವಿವಿಧ ಭಾಗದ ಆಹಾರ ಪ್ರದರ್ಶನ ಮತ್ತು ಮಾರಾಟವು ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಐದು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ನಿತ್ಯವೂ ವಿವಿಧ ರೀತಿಯ ಮನರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರುಗಲಿವೆ.

ಇದನ್ನೂ ಓದಿ:ಜ.12ರಂದು ಹುಬ್ಬಳ್ಳಿಗೆ ಮೋದಿ ಆಗಮನ .. ರೈಲ್ವೆ ಮೈದಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ, ಪರಿಶೀಲನೆ

ABOUT THE AUTHOR

...view details