ಹುಬ್ಬಳ್ಳಿ:ಸ್ವಾಮಿ ವಿವೇಕಾನಂದರ ಜನ್ಮದಿನ ಹಿನ್ನೆಲೆಯಲ್ಲಿಇಂದಿನಿಂದ ಐದು ದಿನಗಳ ಕಾಲ ಹುಬ್ಬಳ್ಳಿ ಧಾರವಾಡದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ವಿದ್ಯಾನಗರಿ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಜೆ 4 ಗಂಟೆಗೆ ಹುಬ್ಬಳ್ಳಿ ರೈಲ್ವೇ ಮೈದಾನದಲ್ಲಿ ಯುವಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸುಮಾರು 25 ಸಾವಿರ ಯುವಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿಯಿಂದ ಯುವಜನೋತ್ಸವ ಉದ್ಘಾಟನೆಯಾಗುತ್ತಿದ್ದಂತೆ ಧಾರವಾಡದ ಕೆಸಿಡಿ ಮೈದಾನದಲ್ಲಿಯೂ ವಿಶೇಷ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಸಂಜೆ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಖ್ಯಾತ ಗಾಯಕ ವಿಜಯ್ ಪ್ರಕಾಶ್ ನಡೆಸಿಕೊಡುವರು. ಧಾರವಾಡದ ಕೆಸಿಡಿ, ಕೆಯುಡಿ ಹಾಗೂ ಕೃಷಿ ವಿವಿಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಬಿಗಿ ಭದ್ರತೆ ಬಗ್ಗೆ ಎಡಿಜಿಪಿ ಪ್ರತಿಕ್ರಿಯೆ: ಮುಂಜಾಗ್ರತಾ ಕ್ರಮವಾಗಿ 2,900 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ 7 ಎಸ್.ಪಿ ದರ್ಜೆ ಅಧಿಕಾರಿಗಳು, 25 ಡಿ.ಐ.ಎಸ್.ಪಿ ದರ್ಜೆ, 60 ಪಿಐ, 18 ಕೆ.ಎಸ್.ಆರ್.ಪಿ ಗರುಡಾ, ಸಿ.ಆರ್.ಡಿ.ಆರ್ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಸುಗಮ ಸಂಚಾರಕ್ಕೆ ಬೆಂಗಳೂರಿನ ಟ್ರಾಫಿಕ್ ಸಿಬ್ಬಂದಿಯನ್ನು ಮೀಸಲಿಟ್ಟಿದ್ದು, ಟ್ರಾಫಿಕ್ ನಿಯಂತ್ರಣಕ್ಕಾಗಿ ಪರ್ಯಾಯ ಮಾರ್ಗಕ್ಕೆ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ರೈಲ್ವೆ ಮೈದಾನದ ಮುಖ್ಯ ವೇದಿಕೆಯ ಸುತ್ತಲೂ ಭಾರಿ ಭದ್ರತೆ ಇರಲಿದೆ. ಮುಂಜಾನೆ 10 ಗಂಟೆಗೆ ನಂತರ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅನುಮತಿ ಇರಲಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ಒಂದು ಗಂಟೆ ಸಂಚಾರಕ್ಕೆ ನಿರ್ಬಂಧ ಇರಲಿದೆ. ಕಾರ್ಯಕ್ರಮಕ್ಕೆ ಆಗಮಿಸುವಾಗ ತಡವಾದಲ್ಲಿ ಅಥವಾ ಇನ್ನಿತರ ವಿಷಯಗಳಿಗೆ ಸಂಬಂಧಿಸಿ ಸಂಘಟನೆಗಳು ಅಥವಾ ಯಾರೇ ಮನವಿ ಕೊಡುವುದಾದರೇ ಪೊಲೀಸ್ ಕಮೀಷನರ್ ಹಾಗೂ ಜಿಲ್ಲಾಧಿಕಾರಿಗೆ ನೀಡಬಹುದು ಎಂದರು.