ಧಾರವಾಡ: 26ನೇ ರಾಷ್ಟ್ರೀಯ ಯುವಜನೋತ್ಸವ ಮೇಳದಲ್ಲಿ ಇಂದು ಕ್ಲೇ ಮಾಡೆಲಿಂಗ್ ಮತ್ತು ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಯುವ ಕಲಾವಿದರು ಮಣ್ಣಿಂದ ಮಾಡಿದ ಅದ್ಭುತ ಕಲಾಕೃತಿಗಳು ಕಣ್ಮನ ಸೆಳೆದವು. ಯುವ ಕಲಾವಿದರ ಕಲ್ಪನೆಯಲ್ಲಿ ಮೇಕ್ ಇನ್ ಇಂಡಿಯಾ, ಭವಿಷ್ಯದ ಭಾರತ, ಭಾರತ 2047 ಕುರಿತ ಪರಿಕಲ್ಪನೆ ಆಧಾರಿತ ಕಲಾಕೃತಿಗಳು ಯುವ ಕಲಾವಿದರ ಪ್ರತಿಭೆಯನ್ನು ಅನಾವರಣ ಗೊಳಿಸಿದವು.
ಕ್ಲೇ ಮಾಡೆಲಿಂಗ್ನಲ್ಲಿ ಮೂಡಿಬಂದ ಯುವ ಕಲಾವಿದರ ಕಲಾಕೃತಿಗಳು:ಮೂರು ದಿನ ಮೂರು ಹಂತದಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡು ದಿನ ಫ್ರಿ ಹ್ಯಾಂಡ್ ಹಾಗೂ ಒಂದು ದಿನ ಪರಿಕಲ್ಪನೆ ಆಧಾರಿತವಾಗಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. ಮೆಟ್ರೋ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನದ ಮುಂದುವರಿಕೆ, ವಿಶ್ವಗುರು ಭಾರತ, ಗ್ರೀನ್ ಇಂಡಿಯಾ, ಡಿಜಿಟಲ್ ಇಂಡಿಯಾದಂತಹ ಮುಂತಾದ ಪರಿಕಲ್ಪನೆಗಳು ಚಿತ್ರಕಲೆಯ ಮೂಲಕ ಅನಾವರಣಗೊಂಡವು. ಮೇಕ್ ಇನ್ ಇಂಡಿಯಾ ಲಾಂಛನವಾದ ಸಿಂಹ, ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ, ಕ್ರೀಡೆ, ಭಾರತದ ಭೂಪಟ, ಬುದ್ಧ, ನರೇಂದ್ರ ಮೋದಿ ಅವರ ಮುಖ ಸೇರಿದಂತೆ ಅನೇಕ ಕಲಾಕೃತಿಗಳನ್ನು ಯುವ ಕಲಾವಿದರು ಕ್ಲೇ ಮಾಡೆಲಿಂಗ್ನಲ್ಲಿ ಪ್ರದರ್ಶಿಸಿದರು.
ಈ ಕಲಾವಿದರು ತಮ್ಮ ಮನದಾಳದಲ್ಲಿ ಮೂಡುವ ಕಲ್ಪನೆಗಳಿಗೆ ಜೀವತುಂಬುವ ಕಾರ್ಯದಲ್ಲಿ ಉತ್ಸುಕತೆಯಿಂದ ಮಗ್ನರಾಗಿರುವುದು ನೋಡುವವರಲ್ಲಿಯೂ ಸಹ ಉತ್ಸಾಹ ತುಂಬುವಂತಿತ್ತು. ವಿಶಾಲವಾದ ಹಸಿರು ಹುಲ್ಲಿನ ಹಾಸಿಗೆಯ ಮೇಲೆ ನಿಂತ ಕಲಾವಿದರಿಂದ ಮೂಡಿಬಂದ ಮಣ್ಣಿನ ಕಲಾಕೃತಿಗಳು ನೋಡುಗರನ್ನು ತಮ್ಮತ್ತ ಕೈ ಮಾಡಿ ಕರೆಯುತ್ತಿವೆಯೇ ಎಂಬಂತೆ ಭಾಸವಾದ ಅನುಭವ ನೀಡಿದವು.