ಹುಬ್ಬಳ್ಳಿ :ಯಡಿಯೂರಪ್ಪ ಅವರು ನಮ್ಮ ಸರ್ವ ಸಮ್ಮತಿಯ ನಾಯಕ. ಪಾರ್ಟಿಯ ಸರ್ವಶ್ರೇಷ್ಠ ಲೀಡರ್. ಅವರನ್ನು ಕಡಗಣಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರು ಇವತ್ತಿನಿಂದ ಹಾನಗಲ್ ಚುನಾವಣಾ ಪ್ರವಾಸ ಕೈಗೊಂಡಿದ್ದಾರೆ. ನಂತರ ಎರಡು ದಿನಗಳ ಕಾಲ ಸಿಂದಗಿಯಲ್ಲಿ ಪ್ರಚಾರ ಮಾಡುತ್ತಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಪೂರ್ವಭಾವಿ ಸಭೆ ಕರೆದಿದ್ದೇವೆ. ಸಭೆಯಲ್ಲಿ ಪರಿಷತ್ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಹಾನಗಲ್, ಸಿಂದಗಿ ಚುನಾವಣೆ ಪ್ರಚಾರ ನಡೆದಿದೆ. ನಮ್ಮೆಲ್ಲ ಪ್ರಮುಖರು ಅಲ್ಲೆ ಇದ್ದು ಪ್ರಚಾರ ನಡೆಸಿದ್ದಾರೆ. ಎರಡು ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತೇವೆ ಎಂದರು.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರ್ಎಸ್ಎಸ್ ಬಗ್ಗೆ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಆರ್ಎಸ್ಎಸ್ ಬಗ್ಗೆ ತಿಳಿದುಕೊಳ್ಳಬೇಕು. ಮೊದಲು ಅವರು ಶಾಖೆಗೆ ಬರಬೇಕು. ಈಗಾಗಲೇ ಅವರಿಗೆ ಕರೆ ಕೊಟ್ಟಿದ್ದೇವೆ. ಎರಡು ದಿನ ಶಾಖೆಗೆ ಬರಲಿ ಸಂಘಟನೆ ಏನು ಕಲಿಸುತ್ತದೆ ಅನ್ನೋದನ್ನ ನೋಡಲಿ ಎಂದರು.
ಕುಟುಂಬ ರಾಜಕಾರಣಿಗಳಿಗೆ ಆರ್ಎಸ್ಎಸ್ ಅರ್ಥವಾಗಲ್ಲ : ಹೆಚ್ಡಿಕೆ ಹಾಗೂ ಅವರ ತಂದೆ ಕುಟುಂಬ ರಾಜಕಾರಣ ಮಾಡುತ್ತ ಬಂದಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ಕೆಪಿಎಸ್ಸಿಯಿಂದ ಹಿಡಿದು, ಎಲ್ಲಾ ಇಲಾಖೆಯ ಗುಮಾಸ್ತನವರೆಗೆ ಅವರ ಕುಟುಂಬಸ್ಥರನ್ನ ಇಟ್ಟಿದ್ದರು. ಕುಟುಂಬ ರಾಜಕಾರಣಿ ಮಾಡುತ್ತ ಬಂದವರಿಗೆ ಎಲ್ಲವೂ ಹಾಗೆಯೇ ಕಾಣಿಸುತ್ತದೆ ಎಂದರು.
ಚುನಾವಣಾ ವೇಳೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕಾಂಗ್ರೆಸ್ :ಸಿಎಂ ಉದಾಸಿ ಅವರು ಸಚಿವ ಸ್ಥಾನ ಸಿಗದ ಕೊರಗಿನಲ್ಲಿ ಸಾವನ್ನಪ್ಪಿದ್ರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಸಚಿವ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು. ಈ ರೀತಿ ಅಪಪ್ರಚಾರ ಮಾಡೋದು ಸರಿಯಲ್ಲ. ಉದಾಸಿ ಅವರು ಯಾವ ಸಂದರ್ಭದಲ್ಲಿಯೂ ಸಚಿವ ಸ್ಥಾನದ ಬಗ್ಗೆ ಚರ್ಚೆ ಮಾಡಿಲ್ಲ. ಶಾಸಕನಾಗಿ, ಹಿರಿಯರಾಗಿ ಅವರು ಕೆಲಸ ಮಾಡುತ್ತಿದ್ದರು ಎಂದರು.
ಸೋಲುವ ಭೀತಿಯಲ್ಲಿ ಅಪಪ್ರಚಾರ :ಚುನಾವಣಾ ಸಂದರ್ಭದಲ್ಲಿ ಜನರಿಗೆ ತಪ್ಪು ಕಲ್ಪನೆ ಮೂಡಿಸುವುದು ಕಾಂಗ್ರೆಸ್‌ನ ಸಂಸ್ಕೃತಿ. ಚುನಾವಣೆ ಗೆಲ್ಲೋದಿಲ್ಲ ಅನ್ನೋ ಕಾರಣಕ್ಕೆ ಈ ರೀತಿ ಅಪ್ರಚಾರ ಮಾಡುತ್ತಿದ್ದಾರೆ. ಒಂದು ಕಡೆ ಉದಾಸಿ ಅವರ ಬಗ್ಗೆ ಅಪಾದನೆ ಮಾಡುತ್ತಾರೆ. ಸಿದ್ದರಾಮಯ್ಯ ಭ್ರಷ್ಟಾಚಾರದ ಆಪಾದನೆ ಮಾಡಿದ್ದಾರೆ. ಇದು ಸರಿಯಲ್ಲ. ಡಿಕೆಶಿ ಮೇಲಿನ ಭ್ರಷ್ಟಾಚಾರದ ಕುರಿತು ಎಸಿಬಿಗೆ ದೂರು ದಾಖಲಾಗಿದೆ. ಅದರ ತನಿಖೆ ನಡೆಯಲಿ ಎಂದು ಮಾಜಿ ಸಿಎಂ ಶೆಟ್ಟರ್ ವಾಗ್ದಾಳಿ ನಡೆಸಿದರು.
ಹೆಚ್ಡಿಕೆ ಮೇಲೆ ಸಾಕಷ್ಟು ಭ್ರಷ್ಟಾಚಾರದ ಅಪಾದನೆಗಳಿವೆ :ಕಾಂಗ್ರೆಸ್ ಮತ್ತು ಬಿಜೆಪಿ ಭ್ರಷ್ಟ ಪಕ್ಷಗಳು. ಮತದಾರರು ಪ್ರಾದೇಶಿಕ ಪಕ್ಷಕ್ಕೆ ಮತ ನೀಡುತ್ತಾರೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ಆಗಲಿ, ಮತ್ತೊಬ್ಬರಾಗಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಅರ್ಥವೇ ಇಲ್ಲ. ಹೆಚ್ಡಿಕೆ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆಪಾದನೆ ಬಂದಿದ್ದಾವೆ. ಎಲ್ಲರಿಗೂ ಅದು ಗೊತ್ತಿದೆ ಎಂದರು.