ಹುಬ್ಬಳ್ಳಿ:ಕಾಂಗ್ರೆಸ್ ತೊರೆದು ಕಮಲ ಬಾವುಟ ಹಿಡಿದಿದ್ದ ಮಾಜಿ ಎಂ.ಎಲ್.ಸಿ ನಾಗರಾಜ ಛಬ್ಬಿಗೆ ಬಿಜೆಪಿ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡುವ ಮೂಲಕ ವಲಸಿಗ ಅಭ್ಯರ್ಥಿಗೆ ಮಣೆ ಹಾಕಿದೆ. ಕಾಂಗ್ರೆಸ್ ಟಿಕೆಟ್ ವಂಚಿತ ನಾಗರಾಜ ಛಬ್ಬಿ ಕೆಲ ದಿನಗಳ ಹಿಂದೆ ಕೈ ಬಿಟ್ಟು ಬಿಜೆಪಿ ಪಾಳಯ ಸೇರ್ಪಡೆಯಾಗಿದ್ದರು. ಇದೀಗ ಪಕ್ಷ ಛಬ್ಬಿಗೆ ಮಣೆ ಹಾಕಿದ್ದು, ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆಳಿಸಲು ಪಕ್ಷ ಅವಕಾಶ ಕಲ್ಪಿಸಿದೆ. ಈಗಾಗಲೇ ಹಾಲಿ ಶಾಸಕ ಸಿ.ಎಂ. ನಿಂಬಣ್ಣವರ ಅವರಿಗೆ ಟಿಕೆಟ್ ತಪ್ಪಿಸಿ ನಾಗರಾಜ ಛಬ್ಬಿಗೆ ಟಿಕೆಟ್ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸಿ.ಎಂ. ನಿಂಬಣ್ಣವರ ಯಾರಿಗಾದರೂ ಟಿಕೆಟ್ ನೀಡಿದರೇ ತಕ್ಕ ಪಾಠ ಕಲಿಸುವ ಎಚ್ಚರಿಕೆ ಸಹ ನೀಡಿದ್ದರು. ಇದರ ನಡುವೇ ಟಿಕೆಟ್ ತಪ್ಪಿದ್ದು ನಿಂಬಣ್ಣನರ್ ಸಿಡಿದೆಳುವ ಸಾಧ್ಯತೆ ಹೆಚ್ಚಿದೆ. ಇನ್ನು ನಾಗರಾಜ್ ಛಬ್ಬಿ ಹಾಗೂ ಸಂತೋಷ ಲಾಡ್ ನಡುವೇ ನೇರ ಪೈಪೋಟಿ ಏರ್ಪಟ್ಟಿದೆ. ಕೋವಿಡ್ ಸಮಯದಲ್ಲಿ ಇಬ್ಬರು ನಾಯಕರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಛಬ್ಬಿ ಗ್ರಾಮ ವಾಸ್ತವ್ಯ ಮಾಡುವುದರ ಜೊತೆಗೆ ಜನರ ಸಂಪರ್ಕ ಬೆಳೆಸಿಕೊಂಡಿದ್ದಾರೆ.
ಮತ್ತೊಂದೆಡೆ ಸಂತೋಷ್ ಲಾಡ್ ಕೂಡ ಕೋವಿಡ್ ಸಮಯದಲ್ಲಿ ಜನರಿಗೆ ಪಡಿತರ ವಿತರಣೆ ಮಾಡುವ ಮೂಲಕ ನೆರವಿಗೆ ನಿಂತಿದ್ದರು. ಇಬ್ಬರು ನಾಯಕರು ಹೊರಗಿನವರಾಗಿದ್ದಾರೆ. ಆದ್ರೆ ಸ್ಥಳೀಯ ಹಾಗೂ ತಾಲೂಕಿನವರಾದ ನಿಂಬಣ್ಣನವರ್ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ನಾನು ಸ್ಥಳೀಯ ನನ್ನ ಜನ ಕೈ ಬಿಡುವುದಿಲ್ಲ ಎಂದು ಪ್ರಚಾರ ಕೈಗೊಂಡಿದ್ದು, ಕ್ಷೇತ್ರದ ಜನ ಯಾರತ್ತ ಒಲವು ತೋರುತ್ತಾರೆ ಎಂಬುದು ಇನ್ನಷ್ಟೇ ತಿಳಿಯಲಿದೆ.