ಧಾರವಾಡ:ಕೊರೊನಾ ಎರಡನೇ ಅಲೆ ಜೋರಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಸಾವಿನ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಮೃತರ ಅಂತ್ಯಕ್ರಿಯೆ ಮಾಡುವವರನ್ನು ಹುಡುಕಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಆದರೆ ಧಾರವಾಡದ ಮುಸ್ಲಿಂ ಸಂಘಟನೆಗಳು ಕೊವೀಡ್ನಿಂದ ಮೃತರಾದವರ ಅಂತ್ಯಕ್ರಿಯೆ ನೆರವೇರಿಸುತ್ತಿವೆ.
ಧಾರವಾಡದ ನಜರತ್ ಉಲ್ ಉಲುಮಾ, ಅಂಜುಮಾನ್ ಸಂಸ್ಥೆ, ಜನ್ನತ್ ನಗರ ಮಸೀದಿ ಸಮಿತಿ ಹಾಗೂ ಇತ್ತೇಹಾದ್ ಗ್ರೂಪ್ಗೆ ಸೇರಿದ ಸ್ವಯಂ ಸೇವಕರು ಮಾನವೀಯ ಕಾರ್ಯ ಮಾಡುತ್ತಿದ್ದಾರೆ.
ಅಂತ್ಯಕ್ರಿಯೆ ನಡೆಸುವ ಮುಸ್ಲಿಂ ಸಂಘಟನೆಗಳು ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಅವರವರ ಧರ್ಮದ ಪ್ರಕಾರ ನಡೆಸಲು ಆಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದರ ಮಧ್ಯೆಯೇ ಧಾರವಾಡದಲ್ಲಿ ಮುಸ್ಲಿಂ ಯುವಕರು ಕೋವಿಡ್ನಿಂದ ಮೃತಪಟ್ಟ ಹಿಂದೂ ವ್ಯಕ್ತಿಗಳ ಅಂತ್ಯಕ್ರಿಯೆಯನ್ನು ಹಿಂದೂ ಧರ್ಮದ ಅವರ ಜಾತಿಯ ಸಂಪ್ರದಾಯದಂತೆಯೇ ಹಾಗೂ ಮುಸ್ಲಿಂರ ಅಂತ್ಯಕ್ರಿಯೆಗಳನ್ನು ಮುಸ್ಲಿಂ ಸಂಪ್ರದಾಯಂತೆ ನೆರವೇರಿಸುವ ಮೂಲಕ ಮಾನವೀಯ ಕೆಲಸ ಮಾಡುತ್ತಿದ್ದಾರೆ.
ಕೊರೊನಾ ಮೊದಲ ಅಲೆಯಲ್ಲಿ ಸಹ ಮುಸ್ಲಿಂ ಸಂಘಟನೆಗಳು ಈ ಕೆಲಸ ಮಾಡಿವೆ. ಕೊರೊನಾದಿಂದ ಸಾಕಷ್ಟು ಜನ ಮೃತಪಟ್ಟಿದ್ದರು. ಆಗ ಸಹ ಇದೇ ರೀತಿ ಕಾರ್ಯ ಮಾಡಿ 80 ಮಂದಿಯ ಅಂತ್ಯ ಸಂಸ್ಕಾರ ಮಾಡಿದ್ದರು. ಈಗ ಇಲ್ಲಿಯವರೆಗೆ ಏಳು ಅಂತ್ಯ ಸಂಸ್ಕಾರ ಮಾಡಿದ್ದಾರೆ. ನಾಲ್ಕು ಸಂಘಟನೆಗಳು ಸೇರಿ ಒಟ್ಟು 20 ಜನ ಸ್ವಯಂ ಸೇವಕರು ಎರಡು ತಂಡಗಳನ್ನು ಮಾಡಿಕೊಂಡು ಈ ಕಾರ್ಯ ಮಾಡುತ್ತಿದ್ದಾರೆ. ಒಮ್ಮೊಮ್ಮೆ ಒಂದೇ ದಿನ ಎರಡೆರಡು ಅಂತ್ಯ ಸಂಸ್ಕಾರ ಮಾಡುವ ಪ್ರಸಂಗ ಕೂಡ ಬಂದೊದಗಿದೆಯಂತೆ.