ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹುಬ್ಬಳ್ಳಿ:ನಗರದಲ್ಲಿಬಿಆರ್ಟಿಎಸ್ ಯೋಜನೆ ಅನುಷ್ಠಾನಕ್ಕಾಗಿ ಕೆಲ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ಅವಶ್ಯವಾಗಿದ್ದು, ಇದರಲ್ಲಿ ಇಲ್ಲಿನ ಗೋರಿ ತೆರವು ಕೂಡ ಒಂದಾಗಿದೆ. ಇದನ್ನು ಮುಸ್ಲಿಂ ಸಮಾಜದ ಮುಖಂಡರು ಸ್ವಯಂ ಸ್ಥಳಾಂತರ ಮಾಡಿಕೊಳ್ಳುವುದಾಗಿ ಹೇಳಿ ಕಾರ್ಯಾಚರಣೆಗೆ ಸಹಕಾರ ನೀಡಲು ಸಮ್ಮತಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಗಾ ಕಮಿಟಿಯವರಿಗೆ 2020ರ ಮಾರ್ಚ್ ಅಂತಿಮ ನೋಟಿಸ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಕಮಿಟಿಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಡಿ.16ರಂದು ಕಮಿಟಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ, 44 ಮೀಟರ್ ರಸ್ತೆ ನಿರ್ಮಿಸಲು ಆದೇಶಿಸಿತ್ತು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ದರ್ಗಾ ತೆರವು ಕಾರ್ಯಾಚರಣೆ... ಸಂಚಾರ ಮಾರ್ಗ ಬದಲಾವಣೆ
ನ್ಯಾಯಾಲಯದ ಆದೇಶದ ನಂತರ ತೆರವು ಕಾರ್ಯಾಚರಣೆಗಾಗಿ ಬಿಆರ್ಟಿಎಸ್ನವರು ಜಿಲ್ಲಾಡಳಿತದ ಹಾಗೂ ಪೊಲೀಸರ ಸಹಕಾರ ಕೋರಿದ್ದರು. ತೆರವು ಕಾರ್ಯದಲ್ಲಿ ಬರುವ 14ನೇ ಧಾರ್ಮಿಕ ಕಟ್ಟಡ ಇದಾಗಿದೆ. ಈ ಮೊದಲು ಎಲ್ಲ ಧರ್ಮದ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಗೋರಿ ಪ್ರದೇಶದ 1.25 ಗುಂಟೆ ಪ್ರದೇಶವನ್ನು ತೆರವು ಮಾಡಬೇಕಾಗಿದೆ. 62.69 ಲಕ್ಷ ರೂಪಾಯಿ ಸಹ ಪರಿಹಾರ ನೀಡಲಾಗುತ್ತದೆ. ಅಂತೆಯೇ ಆದಷ್ಟು ಬೇಗ ಗೋರಿ ಸ್ಥಳವನ್ನು ಬಿಆರ್ಟಿಎಸ್ ವ್ಯಾಪ್ತಿಗೆ ತೆಗೆದುಕೊಳ್ಳುತ್ತೇವೆ. ಆ ಸ್ಥಳದಲ್ಲಿದ್ದ ವಾಣಿಜ್ಯ ಮಳಿಗೆಗಳನ್ನು ತೆರವು ಮಾಡಲಾಗಿದೆ ಎಂದರು.
ಮುಸ್ಲಿಂ ಸಮಾಜದ ಧರ್ಮಗುರುಗಳು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಗೋರಿ ಸ್ಥಳಾಂತರಕ್ಕೆ ಯಾವ ರೀತಿಯ ಪದ್ದತಿ ಅನುಸರಿಸುತ್ತಾರೋ ಅದಕ್ಕೆ ಅಗತ್ಯವಾದ ಯಂತ್ರೋಪಕರಣಗಳು ಮತ್ತು ಕಾರ್ಮಿಕರನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಬಿಆರ್ಟಿಎಸ್ ಯೋಜನೆಯಲ್ಲಿ ಇನ್ನಷ್ಟು ಧಾರ್ಮಿಕ ಸ್ಥಳಗಳ ತೆರವು ಕಾರ್ಯಾಚರಣೆ ಕೈಗೊಳ್ಳುವುದು ಅವಶ್ಯವಿದ್ದು, ಅದನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ದರ್ಗಾ ತೆರವಿಗೆ ಖಂಡನೆ: ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ