ಧಾರವಾಡ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಾಗಿನಿಂದ ರಾಜ್ಯದ ಬಹುತೇಕ ಸ್ವಾಮೀಜಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ಬಿಎಸ್ವೈ ಅವರನ್ನು ಕೈಬಿಟ್ಟರೆ ಸರ್ಕಾರ ಬೀಳುವುದು ಗ್ಯಾರಂಟಿ ಎಂದು ಸಿಎಂ ಪರ ಇಲ್ಲಿನ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.
ಬಿಎಸ್ವೈ ಪರ ಮಾತನಾಡಿದ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನಂತ ಸಿಎಂ ಸಿಗುವುದು ಕಷ್ಟ, ಅವರನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಲೇಬೇಕು. ಯಡಿಯೂರಪ್ಪ ಕೈ ಬಿಟ್ಟರೇ ಆರೇ ತಿಂಗಳಲ್ಲಿ ಸರ್ಕಾರ ಢಮ್ ಅನ್ನುತ್ತೆ(ಬೀಳುತ್ತೆ). ಯಾವುದೇ ಪಕ್ಷದ ಸರ್ಕಾರ ಬಂದರೂ ಅಧಿಕಾರದಲ್ಲಿ ಇರೋಕಾಗಲ್ಲ. ಯಡಿಯೂರಪ್ಪರವರನ್ನು ಬದಲಿಸಿದರೆ ಬಿಜೆಪಿಗೆ ದೊಡ್ಡ ಹೊಡೆತ ಬೀಳುತ್ತದೆ. ಕರ್ನಾಟಕದ ಬಿಜೆಪಿಗೆ ಅವರು ಅಡಿಪಾಯ ಇದ್ದಂತೆ ಎಂದು ಹೇಳಿದರು.
ಅವರಿಂದ ಬಿಜೆಪಿಗೆ ಕರ್ನಾಟಕದಲ್ಲಿ ದೊಡ್ಡ ಬಲ ಇದೆ. ಅವರು ಸಮರ್ಥ ಆಡಳಿತಗಾರ. ಇನ್ನೊಬ್ಬರ ಮನಸ್ಸು ನೋಯಿಸದ ವ್ಯಕ್ತಿ, ಅಂಥವರನ್ನು ಅವಧಿಗೆ ಮುನ್ನ ಬದಲಾಯಿಸುವುದು ನಿಜ ಸುದ್ದಿ ಅಲ್ಲ. ಕೇಂದ್ರದ ನಾಯಕರಾರೂ ಬಾಯ್ಬಿಟ್ಟು ಬದಲಿಸುವ ವಿಚಾರ ಹೇಳಿಲ್ಲ, ಇದೊಂದು ಗಾಳಿ ಸುದ್ದಿ ಅಷ್ಟೇ. ಈ ಸುದ್ದಿ ತಿಳಿದು ಬದಲಾವಣೆ ಮಾಡಿದ್ರೆ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ಹಾಗಾಗಿ ಆ ಕೆಲಸಕ್ಕೆ ಕೈಹಾಕಬಾರದು ಎಂದು ಸ್ವಾಮೀಜಿ ಸಲಹೆ ನೀಡಿದ್ರು.
ಲಿಂಗಾಯತರು ಬೆಳೆಯುವುದು ಕೆಲವರಿಗೆ ಅಸಮಾಧಾನ ಇದೆ. ಲಿಂಗಾಯತ ಶಾಸಕರು ಮುಂದುವರಿಯಬಾರದು, ಲಿಂಗಾಯತರು ಸಿಎಂ ಆಗಬಾರದೆಂಬ ಅಸಮಾಧಾನವೂ ಕೆಲವರಿಗೆ ಇದೆ. ಇದಕ್ಕಾಗಿಯೇ ಒಳಗೊಳಗೆ ಅಸಮಾಧಾನದ ಹೊಗೆ ಇದೆ. ಕೇಂದ್ರದವರು ಅದನ್ನು ಲೆಕ್ಕಿಸಬಾರದು, ವೀರೇಂದ್ರ ಪಾಟೀಲರಿಗೆ ಆದಂತೆ ಬಿಎಸ್‌ವೈಗೆ ಆಗಬಾರದು ಎಂದು ಹೇಳಿದ್ರು.
ಪ್ರಾಣಕ್ಕೆ ಪ್ರಾಣ ಕೊಟ್ಟು ಕರ್ನಾಟಕದಲ್ಲಿ ಬಿಜೆಪಿ ಬೆಳೆಸಿದವರು ಬಿ ಎಸ್ ಯಡಿಯೂರಪ್ಪ. ಅವರಿಂದಲೇ ದಕ್ಷಿಣ ಭಾರತದಲ್ಲಿ ಬಿಜೆಪಿ ಇದೆ. ಹೀಗಾಗಿ ಅವರನ್ನು ಬದಲಿಸುವುದಿಲ್ಲ, ಈ ಬೆಳವಣಿಗೆಗಳು ಬಿಎಸ್‌ವೈಗೆ ನೋವು ತಂದಿವೆ ಎಂದರು.