ಹುಬ್ಬಳ್ಳಿ: ಹಣದ ಆಮಿಷಕ್ಕೊಳಗಾಗಿ 3 ವರ್ಷಗಳ ಹಿಂದೆ ಕೊಲೆ ಮಾಡಿದ್ದ ಆರೋಪಿ ಅರ್ಜುನ ಬುಗಡಿಗೆ 5ನೇ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.
ಹುಬ್ಬಳ್ಳಿ- ಧಾರವಾಡ ನ್ಯಾಯಾಲಯ
ನಗರದ ಹಳೆ ಹುಬ್ಬಳ್ಳಿ ನಿವಾಸಿ ಅರ್ಜುನ ಬುಗಡಿ ತಾಲೂಕಿನ ಅಂಚಟಗೇರಿ ಬಳಿಯ ಗಂಗಿವಾಳ ರಸ್ತೆಯಲ್ಲಿ ಕುಂದಗೋಳ ತಾಲೂಕು ಕುಂಕೂರು ಗ್ರಾಮದ ರೈತ ಮೌಲಾಸಾಬ್ ಬಾಪುಸಾಬ್ ಚಂದರಕಿ ಎಂಬುವವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕೋರ್ಟ್ ಆದೇಶ ನೀಡಿದೆ.
ನ್ಯಾಯಾಧೀಶ ಕೆ.ಎನ್.ಗಂಗಾಧರ ಈ ಪ್ರಕರಣವನ್ನು ವಿಚಾರಣೆ ನಡೆಸಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಡಿ.ಎ.ಬಾಂಡೇಕರ ವಾದ ಮಂಡಿಸಿದ್ದಾರೆ.
ಘಟನೆ ಹಿನ್ನೆಲೆ: 2016 ಜುಲೈ 1ರಂದು ರೈತ ಮೌಲಾಸಾಬ್ ಬಾಪುಸಾಬ್ ಚಂದರಕಿ ಗರ್ಭಿಣಿ ಪತ್ನಿಯನ್ನು ವೈದ್ಯಕೀಯ ತಪಾಸಣೆಗಾಗಿ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಹಣ ಕಡಿಮೆಯಾಗಿದ್ದರಿಂದ ಫೈನಾನ್ಸ್ ಕಂಪನಿಯಲ್ಲಿ ಚಿನ್ನದ ಸರ ಅಡವಿಟ್ಟು 17 ಸಾವಿರ ಹಣ ಪಡೆದಿದ್ದರು.
ಇದಕ್ಕೆ ಹೊಂಚು ಹಾಕಿದ್ದ ಹುಬ್ಬಳ್ಳಿಯ ಆಟೋ ಚಾಲಕ ಅರ್ಜುನ ಬುಗಡಿ ಹಾಗೂ ಆತನ ಅಪ್ರಾಪ್ತ ಸ್ನೇಹಿತ, ಇಬ್ಬರು ಮೌಲಾಸಾಬ್‌ನನ್ನು ಪರಿಚಯ ಮಾಡಿಕೊಂಡಿದ್ದಾರೆ. ಅಂಚಟಗೇರಿ ಗ್ರಾಮದ ಗಂಗಿವಾಳ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮದ್ಯ ಕುಡಿಸಿ ಹಣ ಮತ್ತು ಮೊಬೈಲ್ ಫೋನ್ ಕಿತ್ತುಕೊಂಡಿದ್ದರು. ಈ ಸಂದರ್ಭದಲ್ಲಿ ಗಲಾಟೆಯಾಗಿದೆ. ಇದರಿಂದ ಸಿಟ್ಟಿಗೆದ್ದ ಅರ್ಜುನ್ ತನ್ನ ಬಳಿಯಿದ್ದ ಚಾಕುವಿನಿಂದ ಮೌಲಾಸಾಬ್‌ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದನು. ಗಾಯಗೊಂಡ ಮೌಲಾಸಾಬ್ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಫಲಿಸದೆ ಜು. 4ರಂದು ಮೌಲಾಸಾಬ್ ಮೃತಪಟ್ಟಿದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಆಗಸ್ಟ್ 2ರಂದು ಹಳೇ ಹುಬ್ಬಳ್ಳಿ ಪೊಲೀಸರು ಗಸ್ತಿನಲ್ಲಿದ್ದ ವೇಳೆ, ಕಾರವಾರ ರಸ್ತೆಯ ಖಾಸಗಿ ಗ್ಯಾರೆಜ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅರ್ಜುನ್ ಹಾಗೂ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ವಿಚಾರಣೆಯಲ್ಲಿ ಇವರು ಬಾಯ್ಬಿಟ್ಟಿದ್ದರು. ಮೌಲಾಸಾಬ್ ಪ್ರಕರಣ ತನಿಖೆ ನಡೆಸುತ್ತಿದ್ದ ಗ್ರಾಮೀಣ ಠಾಣೆ ಪೊಲೀಸರು ಅರ್ಜುನ ಹಾಗೂ ಅಪ್ರಾಪ್ತನ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.