ಧಾರವಾಡ :ಲಿಂಗಾಯತ ಪಂಚಮಸಾಲಿ ಸಮಾಜದ ಸಂಘಟನೆ ಆರಂಭವಾಗಿ 20 ವರ್ಷ ಆಗಿವೆ. ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಈ ಸಂಘಟನೆ ಆರಂಭಿಸಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ವೀರಪ್ಪ ಮೊಯ್ಲಿಯಿಂದ ಯಡಿಯೂರಪ್ಪನವರವರೆಗೆ ಮನವಿ ಮಾಡಿಕೊಂಡಿದ್ದೇವೆ. ಇವರಿಗೆಲ್ಲ ಮನವಿ ನೀಡಿ, ಶಾಲು ಹಾಕಿ ಸನ್ಮಾನ ಮಾಡಿ ವಿನಂತಿ ಮಾಡಿದ್ದೆಲ್ಲ ಸಾಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದ 8 ಜನ ಲಿಂಗಾಯತ ಸಿಎಂ ರಾಜ್ಯವಾಳಿದ್ದಾರೆ. ಆದರೆ, ರಾಜಕೀಯ ಏಳಿಗೆಗೆ ಮಾತ್ರ ಲಿಂಗಾಯತ ಸಮುದಾಯ ಬಳಕೆಯಾಗಿದೆ. ಈ 8 ಜನ ಸಿಎಂಗಳಿಗೂ ಸುವರ್ಣ ಅವಕಾಶ ಇತ್ತು. ಆದರೆ, ಯಾವ ಸಿಎಂ ಕೂಡ ಲಿಂಗಾಯತ ಸಮಾಜದ ಬೇಡಿಕೆ ಈಡೇರಿಸಲಿಲ್ಲ.