ಹುಬ್ಬಳ್ಳಿ:ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಬಹಳಷ್ಟು ಸ್ಪಂದನೆ ಸಿಗುತ್ತಿದೆ. ಪ್ರಸ್ತುತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣ ಮಾಡಿದ ಮಹಿಳೆ ಸಂಖ್ಯೆ ಈಗ 2 ಕೋಟಿ ದಾಟಿದೆ. ಸಾರ್ವಜನಿಕ ಪ್ರಯಾಣಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯೋಜನೆ ಯಶಸ್ವಿಯಾಗಿ ಮುಂದುವರೆಯುತ್ತಿದೆ ಎಂದು ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಯೋಜನೆ ಜಾರಿಯಾದ ಬಳಿಕ ಮಹಿಳೆಯರುಸಹಿತ ಪುರುಷ ಪ್ರಯಾಣಿಕರಿಂದ ರಾಜ್ಯಾದ್ಯಂತ ಸಂಚರಿಸುವ ಬಸ್ಗಳು ಫುಲ್ ರಶ್ ಆಗುತ್ತಿವೆ. ಮಹಿಳೆಯರಿಗೆ ಉಚಿತ ಪ್ರಯಾಣವೂ ಬಹಳಷ್ಟು ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಜೂನ್ 27ರಂದು ರಂದು ಒಟ್ಟು 14,88,320 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ ರೂ. 3,68,72,769 ಗಳಾಗಿದೆ. ಇದರೊಂದಿಗೆ ಶಕ್ತಿ ಯೋಜನೆಯ ಆರಂಭದ ದಿನ ಜೂ.11ರಿಂದ ಜೂ.27 ರವರೆಗೆ ಒಟ್ಟು 2,14,75,162 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ ರೂ. 54,44,96,848 ಗಳಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.