ಹುಬ್ಬಳ್ಳಿ:ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಮೂರು ತಿಂಗಳು ಪೂರೈಸಿದೆ. ಇದುವರೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ 13.20 ಕೋಟಿ ಮಹಿಳೆಯರು ಶೂನ್ಯ ಟಿಕೆಟ್ ಪಡೆದುಕೊಂಡು ಉಚಿತ ಸಂಚಾರ ಮಾಡಿದ್ದು, ಇದರ ಟಿಕೆಟ್ ಪ್ರಯಾಣದ ಮೊತ್ತ 332.77 ಕೋಟಿ ರೂ.ಗಳಾಗಿದೆ.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದಿಂದ ಆರಂಭಿಸಲಾಗಿರುವ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಜಾರಿಯಾಗಿ ಸೆಪ್ಟೆಂಬರ್ 10ಕ್ಕೆ ಮೂರು ತಿಂಗಳು ಪೂರೈಸಿದೆ. ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಮುಂದುವರೆದಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ ಶೂನ್ಯ ಟಿಕೆಟ್ ಸಂಖ್ಯೆ 13,20,53,266 ಆಗಿದ್ದು, ಉಚಿತ ಪ್ರಯಾಣದ ಟಿಕೆಟ್ ಮೊತ್ತ 332,77,03,789 ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೂನ್ 11ರಿಂದ 30 ರವೆರೆಗೆ 2.55 ಕೋಟಿ ಶೂನ್ಯ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ 65.15 ಕೋಟಿ ರೂ.ಗಳಾಗಿದೆ. ಜುಲೈ ತಿಂಗಳಲ್ಲಿ 4.48 ಕೋಟಿ ಶೂನ್ಯ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣಿಸಿದ್ದು, ಪ್ರಯಾಣದ ಟಿಕೆಟ್ ಮೊತ್ತ 111.78 ಕೋಟಿ ರೂ.ಗಳಾಗಿದೆ. ಹಾಗೆಯೇ ಆಗಸ್ಟ್ ತಿಂಗಳಲ್ಲಿ 4.61 ಕೋಟಿ ಶೂನ್ಯ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಟಿಕೆಟ್ ಮೊತ್ತ 115.42 ಕೋಟಿ ರೂ.ಗಳಾಗಿದೆ. ಸಪ್ಟೆಂಬರ್ 1 ರಿಂದ 10 ರವರೆಗೆ 1.56 ಕೋಟಿ ಶೂನ್ಯ ಟಿಕೆಟ್ ಪಡೆದು ಮಹಿಳೆಯರು ಪ್ರಯಾಣಿಸಿದ್ದು, ಇದರ ಟಿಕೆಟ್ ಮೊತ್ತ 40.42 ಕೋಟಿ ರೂ.ಗಳಾಗಿದೆ.
ವಿಭಾಗವಾರು ಮೂರು ತಿಂಗಳಲ್ಲಿ ಉಚಿತ ಪ್ರಯಾಣ ಮಾಡಿದ ಮಹಿಳೆಯರಿಗೆ ವಿತರಣೆಯಾದ ಶೂನ್ಯ ಟಿಕೆಟ್ ಹಾಗೂ ಪ್ರಯಾಣದ ಮೊತ್ತದ ಮಾಹಿತಿ:
- ವಿಭಾಗ / ಶೂನ್ಯ ಟಿಕೆಟ್ (ಕೋಟಿ ರೂ.ಗಳಲ್ಲಿ) / ಪ್ರಯಾಣದ ಟಿಕೆಟ್ ಮೌಲ್ಯ (ಕೋಟಿ ರೂ.ಗಳಲ್ಲಿ)
- ಹು-ಧಾ ನಗರ ಸಾರಿಗೆ 1.76 / 21.46
- ಹುಬ್ಬಳ್ಳಿ ಗ್ರಾಮಾಂತರ 0.88 / 31.42
- ಧಾರವಾಡ 1.06 / 28.40
- ಬೆಳಗಾವಿ 2.04 / 41.89
- ಚಿಕ್ಕೋಡಿ 1.81 / 45.23
- ಬಾಗಲಕೋಟೆ 1.66 / 51.65
- ಗದಗ 1.32 / 40.02
- ಹಾವೇರಿ 1.46 / 39.87
- ಉತ್ತರ ಕನ್ನಡ 1.22 / 32.84
ಇದನ್ನೂ ಓದಿ:ಗೌರಿ ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ KSRTC ಹೆಚ್ಚುವರಿ ವಿಶೇಷ ಬಸ್ ಸೌಲಭ್ಯ